ಜಿಲ್ಲೆ

ಉಡುಪಿ ಜಿಲ್ಲೆಯ 35 ಗ್ರಾಮಗಳು ಸಂಪೂರ್ಣ ಲಾಕ್‌ಡೌನ್

ಉಡುಪಿ: ಜಿಲ್ಲೆಯಲ್ಲಿ 50ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣಗಳಿರುವ ಗ್ರಾಮಗಳನ್ನು ಬುಧವಾರದಿಂದ ಸಂಪೂರ್ಣ ಲಾಕ್‌ಡೌನ್ ಮಾಡಲು ಜಿಲ್ಲಾಡಳಿತ ನಿರ್ಧಾರ ಕೈಗೊಂಡಿದೆ. ಶಿರೂರು, ಜಡ್ಕಲ್, ಕಂಬದಕೋಣೆ, ನಾಡ, ಕಾವ್ರಾಡಿ, ಹೊಂಬಾಡಿ, ಮಂಡಾಡಿ, ಕೋಟೇಶ್ವರ, ಹಾಲಾಡಿ, ಇಡೂರು ಕುಂಜ್ಞಾಡಿ, ಆಜ್ರಿ, ಆಲೂರು, 38 ಕಳ್ತೂರು, 80 ಬಡಗಬೆಟ್ಟು, ಅಲೆವೂರು, ಪೆರ್ಡೂರು, ತೆಂಕನಿಡಿಯೂರು, ಬೊಮ್ಮರಬೆಟ್ಟು, ಬೆಳಪು, ಬೆಳ್ಳೆ, ಪಡುಬಿದ್ರಿ, ಶಿರ್ವ, ಮಾಳ, ಈದು, ಕುಕ್ಕುಂದೂರು, ಕಡ್ತಲ, ಮರ್ಣೆ, ಪಳ್ಳಿ, ನಿಟ್ಟೆ, ಮಿಯಾರು, ಬೆಳ್ಮಣ್, ಬೆಳ್ವೆ, ಮುದ್ರಾಡಿ, ವರಂಗ ಗ್ರಾಮಗಳಲ್ಲಿ 5 ದಿನಗಳ ಕಾಲ ಎಲ್ಲ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೋಮವಾರ ವಿಡಿಯೋ ಸಂವಾದದ ಮೂಲಕ ನಡೆದ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡಿದ್ದರು. ಗ್ರಾಮೀಣ ಪ್ರದೇಶದಲ್ಲಿ 50ಕ್ಕೂ ಸಕ್ರಿಯ ಪ್ರಕರಣಗಳಿರುವ ಗ್ರಾಮ ಪಂಚಾಯಿತಿಗಳನ್ನು ಅಗತ್ಯ ವಸ್ತುಗಳ ಖರೀದಿಗೆ ಒಂದು ದಿನ ಕಾಲಾವಕಾಶ ನೀಡಿ, ಬುಧವಾರದಿಂದ ಭಾನುವಾರದವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡುವ ಕುರಿತು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದರು.