ಮೈಸೂರು: ಮೈಸೂರು ಆಕಾಶವಾಣಿಯಲ್ಲಿ ಬಿತ್ತರವಾದ ಲಾಕ್‌ಡೌನ್ ಕಥೆಗಳನ್ನು ಕೃತಿ ಮೂಲಕ ಹೊರ ತರಲಾಯಿತು.
ಸಂವಹನ ಪ್ರಕಾಶನದ ಮೂಲಕ ಪ್ರಕಟಿಸಿರುವ ‘ಲಾಕ್‌ಡೌನ್ ಕಥೆಗಳು’ ಸಂಕಲನದ ಪುಸ್ತಕವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿಜಯನಗರದ ಸಾಹಿತ್ಯ ಭವನದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಆಕಾಶವಾಣಿಯ ಹಿರಿಯ ಉದ್ಘೋಷಕ ಪ್ರಭುಸ್ವಾಮಿ ಮಳಿಮಠ ಮಾತನಾಡಿ, ಕೋವಿಡ್ ತಡೆಗಟ್ಟಲು 2020ರ ಮಾರ್ಚ್ 24ರಂದು ಮೊದಲ ಬಾರಿಗೆ ಲಾಕ್‌ಡೌನ್ ಘೋಷಿಸಲಾಯಿತು. ಇದರಿಂದ ಇಡೀ ಜನಸಮೂಹ ಮನೆಯಲ್ಲೇ ಬಂಧಿಯಾಯಿತು. ಈ ಸಂದಿಗ್ಧ ಸಂದರ್ಭದ ಅನುಭವ ಕಥನವನ್ನು ಕೇಳುಗರೊಂದಿಗೆ ಹಂಚಿಕೊಳ್ಳಲು ಮೈಸೂರು ಆಕಾಶವಾಣಿ ಸರಣಿ ಬಾನುಲಿ ಕಾರ್ಯಕ್ರಮ ರೂಪಿಸಿತು ಎಂದರು.
ಕಾರ್ಯಕ್ರಮಕ್ಕಾಗಿ ಸಾರ್ವಜನಿಕರಿಂದ ಕಥೆಗಳನ್ನು ಆಹ್ವಾನಿಸಲಾಯಿತು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುವ ಮೂಲಕ ಕೊಪ್ಪಳ, ವಿಜಯಪುರ, ಬಳ್ಳಾರಿ, ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 170 ಕಥೆ ಬಂದವು. ಅದರಲ್ಲಿ ಆಯ್ದ 75 ಕಥೆ ವಾರದಲ್ಲಿ 3 ದಿನ ಇದು ಪ್ರಸಾರವಾದವು. ಸಹಸ್ರಾರು ಜನರನ್ನು ಇದನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದರು.
ಆಕಾಶವಾಣಿ ಉಪನಿರ್ದೇಶಕ ಎಸ್.ಎಸ್.ಉಮೇಶ್, ಸಹಾಯಕ ನಿರ್ದೇಶಕ ಅಬ್ದುಲ್ ರಶೀದ್, ಕಾರ್ಯಕ್ರಮ ನಿರ್ವಾಹಕ ಎನ್.ಕೇಶವಮೂರ್ತಿ, ಉದ್ಘೋಷಕ ಡಾ.ಮೈಸೂರು ಉಮೇಶ್, ಸಂವಹನ ಪ್ರಕಾಶನದ ಡಿ.ಎನ್.ಲೋಕಪ್ಪ , ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಲೇಖಕಿ ಡಾ.ಶುಭಶ್ರೀ ಪ್ರಸಾದ್ ಇನ್ನಿತರರಿದ್ದರು.