ಜಿಲ್ಲೆ

ಲಾಕ್‌ಡೌನ್ ನಿಯಮದಲ್ಲಿ ಸಡಿಲಿಕೆ ಬೇಕು; ಸಿಎಂ ಅಧ್ಯಕ್ಷತೆಯಲ್ಲಿ ಇಂದು ಸರ್ವಪಕ್ಷ ಸಭೆ, ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿಕೆ

ಬಳ್ಳಾರಿ: ಸೀಲ್‌ಡೌನ್ ಆಗಿರುವ ಪ್ರದೇಶ ಹೊರತುಪಡಿಸಿ ಇತರೆಡೆ ಲಾಕ್‌ಡೌನ್ ನಿಯಮದಲ್ಲಿ ಸಡಿಲಿಕೆ ನೀಡುವುದು ಉತ್ತಮ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಸಚಿವರ ಸಭೆ ಕರೆದು ಕರೊನಾ ಸ್ಥಿತಿಗತಿ ಕುರಿತು ಮಾಹಿತಿ ಪಡೆದಿದ್ದಾರೆ. ಕರೊನಾ ಪರಿಸ್ಥಿತಿ ಆಧರಿಸಿ ಜಿಲ್ಲೆಗಳನ್ನು ಎ, ಬಿ ಮತ್ತು ಸಿ ಎಂದು ವಿಂಗಡಿಸಲಾಗಿದೆ. ರಾಜ್ಯದ ಕೆಲವೆಡೆ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಾ ಸಾಗಿದೆ. ಜನರು ಕೂಡ ತುಂಬಾ ದಿನಗಳಿಂದ ಒಂದೇ ಕಡೆ ಇರುವಂತಾಗಿದೆ. ಈ ಹಿನ್ನೆಲೆಯಲ್ಲಿ ಆರೆಂಜ್ ರೆನ್‌ನಲ್ಲಿ ಲಾಕ್‌ಡೌನ್ ಸಡಿಲಿಕೆ ಬಗ್ಗೆ ಮುಖ್ಯಮಂತ್ರಿಗೆ ನನ್ನ ಸಲಹೆ ನೀಡಿದ್ದೇನೆ. ಜನರು ಸಾಮಾಜಿಕ ಅಂತರ ಕಾಪಾಡುವ ಮೂಲಕ ಸಹಕಾರ ನೀಡಬೇಕೆಂದು ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಏ.19ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ನಾಯಕರ ಸಭೆ ಆಯೋಜಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರೊನಾ ನಿಯಂತ್ರಣ ಹಾಗೂ ಏ.20ರ ಬಳಿಕ ರಾಜ್ಯದಲ್ಲಿ ಲಾಕ್‌ಡೌನ್ ಸಡಿಲಿಕೆ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದರು.