ಮೈಸೂರು: ಲಾಕ್‌ಡೌನ್ ಗುರುವಾರ ಮತ್ತಷ್ಟು ಸಡಿಲಗೊಂಡಿದ್ದು, ಬರೋಬ್ಬರಿ 54 ದಿನಗಳ ಬಳಿಕ ಸಾಂಸ್ಕೃತಿಕ ನಗರಿ ಮೈಸೂರು ಸಹಜ ಸ್ಥಿತಿಯತ್ತ ಮುಖ ಮಾಡುತ್ತಿದೆ. ವ್ಯಾಪಾರ- ವಹಿವಾಟು ಪುನರಾರಂಭವಾಗಿವೆ. ಆದರೆ, ಕೆಲ ನಿರ್ಬಂಧಗಳು ಇನ್ನೂ ಮುಂದುವರಿದಿವೆ.
ಕರೊನಾ ವೈರಾಣು ಹರಡುವಿಕೆ ತಡೆಯಲು ನಗರದಲ್ಲಿ ಮಾರ್ಚ್ 14ರಿಂದಲೇ ಕೆಲ ನಿರ್ಬಂಧಗಳನ್ನು ಹೇರಲಾಯಿತು. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು, ಚಿತ್ರಮಂದಿರ, ಮಾಲ್‌ಗಳು, ಮೃಗಾಲಯ, ದೇವಸ್ಥಾನ, ಅರಮನೆಯನ್ನು ಬಂದ್ ಮಾಡಲಾಯಿತು. ಬಳಿಕ ಮಾ.22ರಂದು ಜನತಾ ಕರ್ಫ್ಯೂ ಬಳಿಕ ಲಾಕ್‌ಡೌನ್ ಜಾರಿಗೊಂಡಿತ್ತು. ಅಂದಿನಿಂದ ಸಾಂಸ್ಕೃತಿಕ ನಗರಿ ಬಹುತೇಕ ನಿಶ್ಶಬ್ಧವಾಗಿದೆ. ಎತ್ತ ನೋಡಿದರೂ ಖಾಲಿ ಖಾಲಿ ಹೊಡೆಯುತ್ತಿತ್ತು. ವ್ಯಾಪಾರ- ವಹಿವಾಟು ಕೂಡ ಬಂದ್ ಆಗಿತ್ತು. ಆದರೆ, ಅಗತ್ಯ ವಸ್ತುಗಳ ವ್ಯಾಪಾರಕ್ಕೆ ಮಾತ್ರ ಭಂಗವಾಗಿರಲಿಲ್ಲ.
ಕರೊನಾ ನಗರದಲ್ಲಿ ಹತೋಟಿಗೆ ಬಂದಿದೆ. 16 ದಿನದಿಂದ ಹೊಸ ಕೋವಿಡ್- 19 ಪ್ರಕರಣಗಳು ಪತ್ತೆಯಾಗಿಲ್ಲ. ಹೀಗಾಗಿ, ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೆ ಜಿಲ್ಲೆ ಜಿಗಿದಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ಕರೊನಾ ಲಾಕ್‌ಡೌನ್‌ನಿಂದ ಬಂದ್ ಆಗಿದ್ದ ನಗರದ ಎಲ್ಲ ಅಂಗಡಿಗಳನ್ನು ತೆರೆಯಲು ನಗರಪಾಲಿಕೆ ಅನುಮತಿ ನೀಡಿದೆ. ನಿರ್ಬಂಧ ಹೇರಿದ್ದ ನಗರದ 91 ರಸ್ತೆಗಳು ಸೇರಿ ಎಲ್ಲ ರಸ್ತೆಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಎಲ್ಲ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಇದು ವ್ಯಾಪಾರಸ್ಥರಲ್ಲಿ ಸಂತಸ ಮೂಡಿಸಿದೆ. ಇಷ್ಟು ದಿನ ಮನೆಯಲ್ಲೇ ಇದ್ದ ವ್ಯಾಪಾರಸ್ಥರು, ಗುರುವಾರ ಅಂಗಡಿಗಳ ಬಾಗಿಲು ತೆರೆದರು. ತಿಂಗಳುಗಟ್ಟಲೇ ಬಂದ್ ಆಗಿದ್ದರಿಂದ ವಸ್ತುಗಳ ಮೇಲಿದ್ದ ಧೂಳು ತೆಗೆದು, ಸ್ವಚ್ಛಗೊಳಿಸಿದರು. ಬಟ್ಟೆ ಅಂಗಡಿ, ಚಿನ್ನದ ಅಂಗಡಿ, ಪಾದರಕ್ಷೆ, ಪುಸ್ತಕ ಅಂಗಡಿ ಸೇರಿ ವಿವಿಧ ಬಗೆಯ ವ್ಯಾಪಾರ ತೆರೆದುಕೊಂಡಿದೆ.
ಲಾಕ್‌ಡೌನ್ ಸಡಿಲಗೊಂಡ ಬೆನ್ನಹಿಂದೆಯೇ ನಗರದಲ್ಲಿ ವಾಹನ ಸಂಚಾರ ಎಂದಿನಂತೆ ಕಂಡು ಬಂತು. ಅರಮನೆ ಸುತ್ತಲಿನ ರಸ್ತೆಗಳು, ಜೆಎಲ್‌ಬಿ, ಸಯ್ಯಜಿರಾವ್ ರಸ್ತೆ, ದೇವರಾಜ ಅರಸು ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಕಂಡು ಬಂತು. ಇಷ್ಟು ದಿನ ಮನೆಯಲ್ಲೇ ಇದ್ದ ಸಾರ್ವಜನಿಕರು ಕೂಡ ರಸ್ತೆಗಿಳಿದು ಓಡಾಟ ನಡೆಸಿದರು.