ಜಿಲ್ಲೆ

8 ಜಿಲ್ಲೆಗಳ ಬಾಗಿಲು ಬಂದ್: ಬೆಂಗಳೂರು ಪೂರ್ಣ ಲಾಕ್, ಒಳ, ಹೊರ ಪ್ರವೇಶ ನಿಷಿದ್ಧ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕರೊನಾ ಸಮಸ್ಯೆ ಎದುರಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳು ಮಂಗಳವಾರ ರಾತ್ರಿಯಿಂದಲೇ ಸಂಪೂರ್ಣ ಬಾಗಿಲು ಮುಚ್ಚಿವೆ. ತುರ್ತು ಸಂದರ್ಭದಲ್ಲಿ ಪಾಸ್ ಪಡೆಯದ ಹೊರತು ರಾಜಧಾನಿ ಪ್ರವೇಶಿಸಲು ಅಥವಾ ಹೊರ ಹೋಗಲು ಅವಕಾಶ ಕಲ್ಪಿಸದಂತೆ ಪೊಲೀಸರು ಅಭೇದ್ಯ ಕೋಟೆ ಕಟ್ಟಿದ್ದಾರೆ.

ಬೆಂಗಳೂರು ಸಹಿತ ಒಟ್ಟು 8 ಜಿಲ್ಲೆಗಳು ವಾರ ಕಾಲ ಪೂರ್ಣ ಬಂದ್ ಆಗಲಿದ್ದು, ಉಳಿದೆಡೆ ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ದಿಗ್ಬಂಧನ ಘೋಷಿಸುವ ಅಥವಾ ಭಾಗಶಃ ನಿರ್ಬಂಧ ವಿಧಿಸುವ ಅಧಿಕಾರವನ್ನು ಜಿಲ್ಲಾಡಳಿತಗಳಿಗೆ ನೀಡಲಾಗಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ಅನುಸರಿಸಿ ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳು ಲಾಕ್​ಡೌನ್ ಘೋಷಿಸಿವೆ. ಇನ್ನೂ ಕೆಲವು ಜಿಲ್ಲೆಗಳಲ್ಲಿ ತಾಲೂಕುಗಳಿಗೆ ಸೀಮಿತವಾಗಿ ಲಾಕ್​ಡೌನ್ ಹೇರಲಾಗಿದೆ.

ಕೆಲವು ಜಿಲ್ಲೆಗಳಲ್ಲಿ ನಾಗರಿಕರೇ ಸ್ವಯಂಸ್ಪೂರ್ತಿಯಿಂದ ಲಾಕ್​ಡೌನ್ ಮಾಡಿಕೊಳ್ಳುತ್ತಿದ್ದರೆ, ಇನ್ನೂ ಹಲವೆಡೆ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಜನಜೀವನ ಮುಂದುವರಿಸಿದ್ದಾರೆ.

ಲಾಕ್​ಡೌನ್ ಜಿಲ್ಲೆಗಳ ಚಿತ್ರಣ

* ಬೆಂಗಳೂರು ನಗರ, ಗ್ರಾಮಾಂತರ

ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ತೆರಳುವವರು ಹೆಚ್ಚಾಗಿದ್ದರಿಂದ ಮಂಗಳವಾರವೂ ಹೊರವಲಯದ ಟೋಲ್​ಗಳಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿತ್ತು. ಇನ್ನೊಂದು ವಾರ ಆಹಾರ ಸಾಮಗ್ರಿ, ದಿನಬಳಕೆ ವಸ್ತುಗಳು ಸಿಗುವುದಿಲ್ಲ ಎಂಬ ಆತಂಕದಲ್ಲಿ ಜನತೆ ಮುಗಿಬಿದ್ದು ಖರೀದಿಸಿದರು . ಪ್ರತಿದಿನ ಮದ್ಯಾಹ್ನ 12 ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶವಿದೆ, ಕೈಗಾರಿಕೆಗೆ ನಿರ್ಬಂಧವಿದೆ, ದಿನಬಳಕೆ ವಸ್ತುಗಳ ಆನ್​ಲೈನ್ ಡೆಲಿವರಿ ಮಾಡಬಹುದು.

*ದಕ್ಷಿಣ ಕನ್ನಡ-ಲಾಕ್​ಡೌನ್ ಜಾರಿಯಾಗಿದ್ದು ಇಲ್ಲೂ ವ್ಯಾಪಾರ ವಹಿವಾಟು, ಸಂಚಾರ ನಿಬಂಧಿಸಲಾಗಿದೆ.

*ಧಾರವಾಡ

ಜು. 15ರ ಬೆಳಗ್ಗೆ 10 ಗಂಟೆಯಿಂದ ಜು. 24ರವರೆಗೆ ಜಿಲ್ಲೆ ಲಾಕ್ ಆಗಲಿದೆ. ಸಾರಿಗೆ ಬಸ್, ಖಾಸಗಿ ವಾಹನಗಳ ಸೇವೆ ಸಂಪೂರ್ಣ ಸ್ಥಗಿತ. ಬೇರೆ ರಾಜ್ಯ/ಜಿಲ್ಲೆಗಳಿಗೆ ತೆರಳುವ ವಾಹನಗಳು ಜಿಲ್ಲೆ ಮೂಲಕ ಸಾಗಬಹುದಾದರೂ ಇಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಲು ಅವಕಾಶ ಇಲ್ಲ.

*ಬೀದರ್ -ಜು 15ರ ರಾತ್ರಿ 8ರಿಂದ 22ರ ಬೆಳಗ್ಗೆ 5ರವರೆಗೆ ಲಾಕ್​ಡೌನ್

*ಯಾದಗಿರಿ-ಜು.15ರ ಬುಧವಾರ ಮಧ್ಯರಾತ್ರಿಯಿಂದ ಲಾಕ್​ಡೌನ್ ಜಾರಿ

*ಕಲಬುರಗಿ-ಮಂಗಳವಾರದಿಂದಲೇ ಲಾಕ್​ಡೌನ್ ಜಾರಿ

*ರಾಯಚೂರು-ರಾಯಚೂರು ಮತ್ತು ಸಿಂಧನೂರು ನಗರ ವ್ಯಾಪ್ತಿಗಳಲ್ಲಿ ಮಾತ್ರ ಜು.15 ರಿಂದ 22 ರ ವರೆಗೆ ಲಾಕ್​ಡೌನ್. ಉಳಿದ ಪ್ರದೇಶಗಳನ್ನು ಬಫರ್ ಜೋನ್ ಎಂದು ಘೊಷಣೆ ಮಾಡಲಾಗಿದೆ. ಮನೆಯಲ್ಲಿಯೆ 20 ಜನಕ್ಕೆ ಮೀರದಂತೆ ಮದುವೆಗೆ ಅವಕಾಶ. ಬೆಂಗಳೂರಿನಿಂದ ಬರುವವರ ಕೈಗೆ ಸೀಲ್ ಹಾಕಿ ಹೋಂ ಕ್ವಾರಂಟೈನ್.

ಭಾಗಶಃ ಲಾಕ್​ಡೌನ್

*ಹಾವೇರಿ

*ಶಿಗ್ಗಾಂವಿ, ಹಾನಗಲ್ಲ, ರಾಣೆಬೆನ್ನೂರ, ಹಾವೇರಿ ತಾಲೂಕು ಗುತ್ತಲದಲ್ಲಿ ಸ್ವಯಂಪ್ರೇರಣೆಯಿಂದ ಲಾಕ್​ಡೌನ್. ಹಾನಗಲ್ಲ ತಾಲೂಕಿನಲ್ಲಿ ಮಧ್ಯಾಹ್ನ 3ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೆ ಪೂರ್ಣ ಲಾಕ್​ಡೌನ್, ರಾಣೆಬೆನ್ನೂರನಲ್ಲಿ ಜು. 14ರ ರಾತ್ರಿ 8ರಿಂದ ಜು. 20ರ ಬೆಳಗ್ಗೆ 5ರವರೆಗೆ ಸ್ವಯಂ ಲಾಕ್​ಡೌನ್.

*ಬೆಳಗಾವಿ

*ಗೋಕಾಕ, ಮೂಡಲಗಿ, ಕಾಗವಾಡ, ಅಥಣಿ, ನಿಪ್ಪಾಣಿ ತಾಲೂಕುಗಳಲ್ಲಿ ಸಂಪೂರ್ಣ ಲಾಕ್​ಡೌನ್ ಘೊಷಣೆ ಮಾಡಿದೆ. ಲಾಕ್​ಡೌನ್ ಘೊಷಿತ ತಾಲೂಕುಗಳಿಂದ ಬೇರೆ ತಾಲೂಕಿಗೆ ಹೋಗುತ್ತಿರುವವರಿಗೂ ವಿರೋಧ ವ್ಯಕ್ತವಾಗುತ್ತಿದೆ.

*ಕೊಪ್ಪಳ

ಕೊಪ್ಪಳ, ಗಂಗಾವತಿ, ಹನುಮಸಾಗರ ಸೇರಿ ಪ್ರಮುಖ ನಗರ, ಪಟ್ಟಣಗಳಲ್ಲಿ ಮಧ್ಯಾಹ್ನದವರೆಗೆ ಮಾತ್ರವೇ ವ್ಯಾಪಾರ ವಹಿವಾಟು ನಡೆಯುತ್ತಿದೆ. ಗ್ರಾಮ, ಬೂತ್ ಮಟ್ಟದ ಸಮಿತಿ ಮಾಡಿದ್ದು, ಬೆಂಗಳೂರು ಸೇರಿ ಹೊರ ರಾಜ್ಯದಿಂದ ಬಂದವರನ್ನು ಮನೆಯಲ್ಲಿಯೆ ಕ್ವಾರಂಟೈನ್ ಮಾಡಿಸಲಾಗುತ್ತಿದೆ.

*ಹಾಸನ

ಲಾಕ್​ಡೌನ್ ಆತಂಕ ಇಲ್ಲವಾದರೂ ಕರೊನಾ ಭೀತಿಯಿಂದ ಜನರ ಓಡಾಟ, ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿದೆ. ರಸ್ತೆಯಲ್ಲಿ ವಾಹನಗಳ ದಟ್ಟಣೆ ಕಂಡುಬರುತ್ತಿಲ್ಲ. ಅಂಗಡಿ, ಮುಂಗಟ್ಟುಗಳು ಗ್ರಾಹಕರಿಲ್ಲದೆ ಖಾಲಿ ಹೊಡೆಯುತ್ತಿವೆ. ಕಟ್ಟಿನಕೆರೆ ಮಾರುಕಟ್ಟೆ ಸೇರಿ ಹಲವೆಡೆ ವರ್ತಕರು ಸ್ವಯಂಪ್ರೇರಿತರಾಗಿ ಮಧ್ಯಾಹ್ನ 2ಕ್ಕೆ ಅಂಗಡಿಗಳನ್ನು ಮುಚ್ಚಿದ್ದರು.

*ರಾಮನಗರ

-ಲಾಕ್​ಡೌನ್ ಇಲ್ಲ. ಆದರೆ ಕೆಲ ಹಳ್ಳಿಗಳಲ್ಲಿ ಹೊರಗಿನಿಂದ ಬಂದವರ ಕ್ವಾರಂಟೈನ್​ಗೆ ಜನರೇ ನಿಯಮ ಮಾಡಿಕೊಂಡಿದ್ದಾರೆ.

ಗದಗದಲ್ಲಿ ಇಂದು ನಿರ್ಧಾರ

ಗದಗ ಜಿಲ್ಲೆಯಲ್ಲಿ ಕರೊನಾತಂಕ ಬಿಗಡಾಯಿಸಿದೆ. ಮತ್ತೊಮ್ಮೆ ಲಾಕ್​ಡೌನ್ ಕುರಿತು ಬುಧವಾರ ಅಂತಿಮ ನಿರ್ಣಯಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ಸರ್ವ ಪಕ್ಷಗಳ ಜನಪ್ರತಿನಿಧಿಗಳ ಸಭೆ ಕರೆದು ರ್ಚಚಿಸಿ ಅಂತಿಮ ನಿರ್ಣಯ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

ಉಡುಪಿ ಗಡಿ ಸೀಲ್

-ಜುಲೈ 15ರ ರಾತ್ರಿ 8ರಿಂದ 29ವರೆಗೆ ಜಿಲ್ಲೆಯ ಗಡಿಗಳ ಸೀಲ್​ಡೌನ್. ಜಿಲ್ಲೆಯೊಳಗಿನ ಆರ್ಥಿಕ ಚಟುವಟಿಕೆ ಎಂದಿನಂತೆ ಇರಲಿದೆ. ಸಾರ್ವಜನಿಕ ಬಸ್ ಸಂಚಾರ ನಿರ್ಬಂಧಿಸಲಾಗಿದೆ.

ವಿಜಯವಾಣಿ ಕಳಕಳಿ

ಕರೊನಾ ಸರಪಳಿ ಮುರಿಯಲು ಸರ್ಕಾರದ ಲಾಕ್​ಡೌನ್ ಯಶಸ್ವಿಯಾಗಬೇಕಾದರೆ ಜನಸಾಮಾನ್ಯರ ಬೆಂಬಲ ಅತ್ಯವಶ್ಯಕ. ಮನೆಯಲ್ಲೇ ಇದ್ದು ನಿಯಮ ಪಾಲಿಸಿದರಷ್ಟೇ ಇದಕ್ಕೆ ಯಶಸ್ಸು ಸಿಗುವುದು ಸಾಧ್ಯ.

ಸರ್ಕಾರದ ತೀರ್ಮಾನ

1. ಮುಂದಿನ 2 ವಾರಗಳಲ್ಲಿ ಇನ್ನೂ 25 ಕೋವಿಡ್ ಲ್ಯಾಬ್ ಸ್ಥಾಪನೆ

2. ಪೌರ ಕಾರ್ವಿುಕರಿಗೆ 10000

ರೂ. ರಿಸ್ಕ್ ಭತ್ಯೆ ಘೋಷಣೆ

4. ನಿಗದಿಪಡಿಸಿದ ದರಕ್ಕಿಂತ ಹೆಚ್ಚು ವಸೂಲಿ ಮಾಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ

ಏನಿರುತ್ತೆ, ಏನಿರಲ್ಲ?

ಸಂಪೂರ್ಣ ಲಾಕ್​ಡೌನ್ ಘೋಷಣೆಯಾದ ಜಿಲ್ಲೆಗಳಲ್ಲೂ ಅಗತ್ಯ ವಸ್ತುಗಳ ಖರೀದಿ, ಅಗತ್ಯ ಸೇವೆಗೆ ಅವಕಾಶ ಇರಲಿದೆ. ತರಕಾರಿ, ದಿನಸಿ ಸಾಮಗ್ರಿ, ಹಾಲು, ಔಷಧ, ತುರ್ತು ವೈದ್ಯಕೀಯ ಸೇವೆ, ದಿನಪತ್ರಿಕೆ ಮುಂತಾದ ಸೇವೆಗಳಲ್ಲಿ ವ್ಯತ್ಯಯ ಆಗುವುದಿಲ್ಲ. ಕೃಷಿ, ತೋಟಗಾರಿಕೆ ಸಂಬಂಧಿಸಿದಂತೆ ಎಲ್ಲ ಬಿತ್ತನೆ ಬೀಜ, ರಸಗೊಬ್ಬರ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಪೂರಕ ಚಟುವಟಿಕೆಗಳಿಗೂ ಅನುಮತಿ ನೀಡಲಾಗಿದೆ. ಧಾರ್ವಿುಕ, ರಾಜಕೀಯ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದ್ದು, ಮನೆಯಲ್ಲಿಯೇ ಹೆಚ್ಚಿನ ಜನರಿಲ್ಲದಂತೆ ಮದುವೆಗೆ ಕೆಲವು ಜಿಲ್ಲೆಗಳಲ್ಲಿ ಅವಕಾಶ ನೀಡಲಾಗಿದೆ. ಜಿಲ್ಲೆಗಳಿಗೆ ವಿಶೇಷವಾಗಿ ಬೆಂಗಳೂರಿನಿಂದ ಆಗಮಿಸುವವರ ತಪಾಸಣೆ, ಕೈಗೆ ಕ್ವಾರಂಟೈನ್ ಸೀಲ್ ಮಾಡುವ ಕ್ರಮ ಕೈಗೊಳ್ಳಲಾಗುತ್ತಿದೆ.