ತುಮಕೂರು: ಲಾಕ್‌ಡೌನ್ ಬಿಸಿ ಸಮಾಜದ ಎಲ್ಲ ವರ್ಗಗಳಿಗೂ ತಟ್ಟಲಾರಂಭಿಸಿದೆ. ಕರೊನಾ ಮಹಾಮಾರಿ ನಿಯಂತ್ರಣಕ್ಕೆ ಶಾಲೆ, ಕಾಲೇಜುಗಳಲ್ಲಿ ಎಲ್ಲ ಚಟುವಟಿಕೆೆಗಳು ಸ್ತಬ್ಧವಾಗಿದ್ದು, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿ 3 ತಿಂಗಳಿನಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ.
ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಂಬಿಕೊಂಡು ಲಕ್ಷಕ್ಕೂ ಅಧಿಕ ಸಿಬ್ಬಂದಿ ಕುಟುಂಬ ನಿರ್ವಹಿಸುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿಯೂ 100ಕ್ಕೂ ಹೆಚ್ಚು ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ 5 ಸಾವಿರಕ್ಕೂ ಹೆಚ್ಚು ಸಿಬ್ಬಂದಿ 3 ತಿಂಗಳಿನಿಂದ ವೇತನವಿಲ್ಲದೆ ಈಗ ಶಾಲೆಗಳಲ್ಲಿ ಪ್ರವೇಶಾತಿ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರವು ಸಮಾಜದ ಎಲ್ಲ ವರ್ಗಗಳ ಸಂಕಷ್ಟದಲ್ಲಿ ಸ್ಪಂದಿಸಿದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸಂಕಷ್ಟದ ಬಗ್ಗೆ ಕನಿಷ್ಠ ಚರ್ಚೆಯನ್ನೂ ಮಾಡಿಲ್ಲ ಎಂಬ ನೋವು ಶಿಕ್ಷಕರನ್ನು ಕಾಡಲಾರಂಭಿಸಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಹಣದಾಹದ ಕಾರಣಕ್ಕೆ ಸಮಾಜದಲ್ಲಿ ಇಂತಹ ಶಿಕ್ಷಣ ಸಂಸ್ಥೆಗಳ ಬಗ್ಗೆ ತಾತ್ಸಾರ ಮನೋಭಾವ ಮೂಡಿದೆಯಾದರೂ ಅಲ್ಲಿ ಕೆಲಸ ಮಾಡುವ ಬಡ ಸಿಬ್ಬಂದಿಯ ಬಗ್ಗೆ ಏಕೆ ತಾತ್ಸಾರ ಎಂಬ ಪ್ರಶ್ನೆ ಶಿಕ್ಷಕರದ್ದಾಗಿದೆ.
ಉನ್ನತ ಶಿಕ್ಷಣ ಪಡೆದು ನಿರುದ್ಯೋಗಿಯೂ ಆಗದೆ, ಇತ್ತ ವರ್ಷಪೂರ್ತಿ ಸಂಬಳದ ಉದ್ಯೋಗಿಯೂ ಆಗದೆ ಆರಂಭದಿಂದಲೂ ಅತಂತ್ರವಾಗಿಯೇ ಉಳಿದಿರುವ ಶಿಕ್ಷಕರು, ಸಿಬ್ಬಂದಿಗೆ 3 ತಿಂಗಳಿನಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಕನಿಷ್ಠ ವೇತನ ನೀಡದೆ ವಂಚಿಸಿವೆ. ಉದ್ಯೋಗ ಕಳೆದುಕೊಳ್ಳುವ ಭಯದಿಂದಲೇ ಯಾರೂ ಪ್ರಶ್ನಿಸುವ ಧೈರ್ಯ ಕೂಡ ಮಾಡದೆ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಸಂಘ, ಸಂಸ್ಥೆಗಳು ಬಡ ಕುಟುಂಬಗಳಿಗೆ ಕೈಲಾದ ನೆರವು ನೀಡುತ್ತಿವೆ. ಇಂತಹ ಕಡೆಗಳಲ್ಲಿ ಕೈಚಾಚಲು ಸ್ವಾಭಿಮಾನಿ ಶಿಕ್ಷಕರು ಸಿದ್ಧರಿಲ್ಲ. ದುಡಿದು ತಿಂದ ಕೈಗಳು ಸಂಘಟಿತರಾಗಿಯೂ ಇಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿಗೆ ಕುಟುಂಬ ನಿರ್ವಹಣೆಗೆ ಸಾಕಾಗುವಷ್ಟಾದರೂ ಸಣ್ಣ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು ಎಂಬ ಮನವಿಯನ್ನು ಶಿಕ್ಷಕರು ಮಾಡಿಕೊಂಡಿದ್ದಾರೆ.
ಕನಿಷ್ಠ ವೇತನಕ್ಕೆ ದುಡಿಮೆ : ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 5 ರಿಂದ 15 ಸಾವಿರ ರೂಪಾಯಿ ಸಂಬಳಕ್ಕೆ ಜೀವನವನ್ನೇ ಸವೆಸುತ್ತಿರುವ ಸಾವಿರಾರು ಸಂಖ್ಯೆಯ ಶಿಕ್ಷಕರಿದ್ದಾರೆ. ಬೋಧನೆ ಬಿಟ್ಟು ಬೇರೆ ಯಾವುದೇ ಕೆಲಸ ಮಾಡಲು ಅನುಭವವಿಲ್ಲದ ಇವರು ವಯಸ್ಸನ್ನೆಲ್ಲಾ ಇಲ್ಲಿಯೇ ಸವೆಸಿದವರಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆದಾಯದ ಮೂಲವೇ ಮಕ್ಕಳಿಂದ ಪಡೆಯುವ ಡೊನೇಷನ್ ಆಗಿದ್ದು, ಸಂಕಷ್ಟದಲ್ಲಿರುವ ಪಾಲಕರು ಅದನ್ನು ಕಟ್ಟುವುದು ಅನುಮಾನ. ಹೀಗಾಗಿ ಶಿಕ್ಷಕರ ಬದುಕು ಅಂಧಕಾರದಲ್ಲಿ ಮುಳುಗಲಿದೆ. ಅಸಂಘಟಿತ ಶಿಕ್ಷಕರ ನೋವಿಗೆ ದನಿ ಇಲ್ಲದಂತಾಗಿದ್ದು, ಅವರ ಪರವಾಗಿ ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು ನೆರವಾಗಬೇಕಿದೆ.
ಖಾಸಗಿ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನಾವು ಅಸಂಘಟಿತರು. ಹಾಗಾಗಿ, ಯಾರ ಬಳಿ ನೆರವು ಬಯಸುವುದು. ಆಡಳಿತ ಮಂಡಳಿಯವರು ಅವರ ಖಾತೆಯಲ್ಲಿ ಹಣವಿಲ್ಲದಿರುವುದನ್ನು ತೋರಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. ನಂಬಿರುವ ಕುಟುಂಬಕ್ಕೆ ಊಟವನ್ನೂ ನೀಡಲಾಗದ ಸ್ಥಿತಿಯಲ್ಲಿ ಸಾವಿರಾರು ಶಿಕ್ಷಕ ಕುಟುಂಬಗಳಿವೆ. ಸರ್ಕಾರ ಕನಿಷ್ಟ ಆರ್ಥಿಕ ಸಹಕಾರ ನೀಡಿದರಷ್ಟೇ ನಮಗೂ ಬದುಕು. ನಿರಾಶ್ರಿತ ಶಿಕ್ಷಕ ತುಮಕೂರು