ಮಂಗಳೂರು: ಮಂಗಳೂರಿನಲ್ಲಿ ಒಂದು ಕರೊನಾ ಪ್ರಕರಣ ವರದಿಯಾದರೂ ಜನರು ಜಾಗೃತರಾದಂತೆ ಕಾಣುತ್ತಿಲ್ಲ. ಜಿಲ್ಲಾಡಳಿತ ಲಾಕ್‌ಡೌನ್ ಘೋಷಣೆ ಮಾಡಿದ್ದರೂ ತಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ಸೋಮವಾರ ಬೆಳಗ್ಗಿನಿಂದಲೇ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಜನ ಬೀದಿಗಿಳಿದು ಎಲ್ಲೆಡೆ ಓಡಾಡಿದ್ದಾರೆ. ತಡವಾಗಿ ಎಚ್ಚರಗೊಂಡ ಅಧಿಕಾರಿಗಳು, ಪೊಲೀಸರು ಬಿಸಿ ಮುಟ್ಟಿಸಿ ನಿಯಂತ್ರಣಕ್ಕೆ ಕ್ರಮ ಕೈಗೊಂಡ ಬಳಿಕ ಸೆಕ್ಷನ್ 144 ನಿಷೇಧಾಜ್ಞೆ ಪರಿಸ್ಥಿತಿ ಕಂಡುಬಂತು.
ಸಾರ್ವಜನಿಕ ಸಾರಿಗೆಯನ್ನು ಬಂದ್ ಮಾಡಿದ್ದರಿಂದ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಸೋಮವಾರ ರಸ್ತೆಗೆ ಇಳಿದಿರಲಿಲ್ಲ. ಆದರೂ ಮಂಗಳೂರು-ಮೂಡುಬಿದಿರೆ ನಡುವೆ ಒಂದು ಬಸ್ ಒಂದು ಟ್ರಿಪ್ ಮಾಡಿದೆ. ಬೆಳಗ್ಗೆ ಆಟೋಗಳ ಸಂಚಾರವೂ ಎಂದಿನಂತೆ ಇತ್ತು. ಖಾಸಗಿ ವಾಹನಗಳೂ ನಿಯಂತ್ರಣವಿಲ್ಲದೆ ಓಡಾಟ ನಡೆಸುತ್ತಿದ್ದವು.
ಅಂಗಡಿಗಳು ಓಪನ್: ಜನಜೀವನಕ್ಕೆ ಅವಶ್ಯಕವಾದ ಪಡಿತರ ಅಂಗಡಿ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣಿನ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಆದರೆ ಎಲ್ಲಡೆ ಮೊಬೈಲ್ ರಿಚಾರ್ಜ್ ಅಂಗಡಿಗಳು, ಬಟ್ಟೆ ಅಂಗಡಿಗಳು, ಗುಜುರಿ ಅಂಗಡಿಗಳು, ಫ್ಯಾನ್ಸಿ, ಬೇಕರಿ ಅಂಗಡಿಗಳೂ ತೆರೆದಿದ್ದವು. ಮಂಗಳೂರಿನ ಬಂದರ್ ಪ್ರದೇಶದಲ್ಲಿ ಹೆಚ್ಚಿನ ಅಂಗಡಿ ಮಳಿಗೆಗಳು ವ್ಯಾಪಾರ ನಡೆಸುತ್ತಿದ್ದವು. ಬೆಳ್ತಂಗಡಿಯಲ್ಲಿ ಸೋಮವಾರ ಸಂತೆ ನಡೆಸದಂತೆ ಆದೇಶಿಸಿದ್ದರೂ ಉಲ್ಲಂಘಿಸಿ ವ್ಯಾಪಾರ ನಡೆಯಿತು. ನಂತರ ಪೊಲೀಸರು ಬಂದ್ ಮಾಡಿಸಿದರು.
ಮಾರುಕಟ್ಟೆ ಯಥಾಸ್ಥಿತಿ: ಭಾನುವಾರ ಸಂಪೂರ್ಣ ಬಂದ್ ಆಗಿದ್ದ ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ಸೋಮವಾರ ವ್ಯಾಪಾರ ವಹಿವಾಟು ಎಂದಿನಂತಿತ್ತು. ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಮಾರುಕಟ್ಟೆಗೆ ಆಗಮಿಸಿದ್ದರು. ಬೀದಿ ಬದಿಯಲ್ಲಿ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತವಾಗಿದ್ದರಿಂದ ಹೆಚ್ಚಿನವರು ಮಾರುಕಟ್ಟೆಯಿಂದಲೇ ಖರೀದಿಸಿದ್ದಾರೆ. ಸಾರ್ವಜನಿಕರು ಗುಂಪು ಸೇರುವುದು ಅಪಾಯಕಾರಿ ಎಂದಿದ್ದರೂ, ಮಾರುಕಟ್ಟೆಯಲ್ಲಿ ಸಾವಿರಾರು ಜನರು ಸೇರಿರುವುದು ಆತಂಕಕಾರಿ ವಿಚಾರವಾಗಿತ್ತು.
ಬಂದರು-ಮೀನು ಮಾರುಕಟ್ಟೆ ವಹಿವಾಟು: ಮಂಗಳೂರಿನ ಮಿನುಗಾರಿಕಾ ಬಂದರಿನಲ್ಲಿ ವಹಿವಾಟು ಎಂದಿನಂತಿತ್ತು. ಈಗಾಗಲೇ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಮೀನುವಾರಿಕೆ ಮುಗಿಸಿ ಬಂದರಿಗೆ ಬಂದಿದೆ. ಅದರಲ್ಲಿರುವ ಮೀನುಗಳನ್ನು ಖರೀದಿಸಲು ಮಾರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದು, ಜನರೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದಾರೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ ಮೀನುಮಾರುಕಟ್ಟೆಯಲ್ಲಿ ವ್ಯಾಪಾರ ತುಂಬಾ ಕಡಿಮೆಯಿತ್ತು. ಬೆರಳೆಣಿಕೆಯಷ್ಟು ಗ್ರಾಹಕರಿದ್ದರು ಮಾತ್ರವಲ್ಲದೆ ಮೀನು ಮಾರಾಟ ಮಾಡುವ ಮಹಿಳೆಯರ ಸಂಖ್ಯೆಯೂ ಕಡಿಮೆ ಇತ್ತು.
ಫೀಲ್ಡ್‌ಗಿಳಿದ ಪೊಲೀಸರು: ಜನರು ಅನವಶ್ಯಕವಾಗಿ ನಗರದಲ್ಲಿ ತಿರುಗುತ್ತಿದ್ದಾರೆ ಎಂದು ತಿಳಿದ ಪೊಲೀಸರು ಮಧ್ಯಾಹ್ನದ ಹೊತ್ತಿಗೆ ಮಂಗಳೂರು ಸಹಿತ ಜಿಲ್ಲಾದ್ಯಂತ ನಿಯಂತ್ರಣಕ್ಕೆ ಮುಂದಾದರು. ಕೆಲವು ಪ್ರದೇಶಗಳಲ್ಲಿ ಮೈಕ್ ಮೂಲಕ ಅನೌನ್ಸ್‌ಮೆಂಟ್ ಮಾಡಿದರು. ಫರಂಗಿಪೇಟೆ, ಹೆಜಮಾಡಿ ಟೋಲ್‌ಗೇಟ್, ಜಪ್ಪಿನಮೊಗರು ಮುಂತಾದೆಡೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳನ್ನು ತಡೆದರು. ಆಟೋ ಸಂಚಾರವನ್ನೂ ನಿರ್ಬಂಧಿಸಿದರು. ತೆರೆದಿದ್ದ ತುರ್ತು ಅಗತ್ಯವಲ್ಲದ ಅಂಗಡಿಗಳನ್ನು ಮುಚ್ಚಿಸಿದರು. ಆದರೂ ಹೆದ್ದಾರಿಗಳಲ್ಲಿ ಬಸ್ ಹೊರತುಪಡಿಸಿ ಇತರ ವಾಹನಗಳ ಖಾಸಗಿ ಓಡಾಟ ಮುಂದುವರಿಯಿತು. ದ್ವಿಚಕ್ರ ವಾಹನಗಳು ಸರಾಗವಾಗಿ ಸಂಚರಿಸುತ್ತಿದ್ದವು. ಬಂಟ್ವಾಳದಲ್ಲಿ ತಹಸೀಲ್ದಾರ್ ಸ್ವತಃ ಬೀದಿಗಿಳಿದು ಅಂಗಡಿಗಳನ್ನು ಮುಚ್ಚಿಸಿದ್ದು ಗಮನ ಸೆಳೆಯಿತು.
ಲಾಕ್‌ಡೌನ್‌ನ್ನು ಸಾರ್ವಜನಿಕರು ಅಸಡ್ಡೆ ಮಾಡಬಾರದು. ಕಡ್ಡಾಯವಾಗಿ ಜಾರಿಯಾಗಿರುವ ಕಾನೂನಿನ ಅಂಶ ಉಲ್ಲಂಘಿಸಿದವರ ಮೇಲೆ ಭಾರತೀಯ ದಂಡ ಸಂಹಿತೆ ಕಲಂ 188, 269, 270ರಡಿ ಪ್ರಕರಣ ದಾಖಲಿಸಿ, ಅಗತ್ಯ ಬಿದ್ದಲ್ಲಿ ದಸ್ತಗಿರಿ ಅಥವಾ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಅದಕ್ಕೆ ಅವಕಾಶ ನೀಡದೆ, ಜಿಲ್ಲಾ ದಂಡಾಧಿಕಾರಿಯವರು ನೀಡಿರುವ ಆದೇಶವನ್ನು ಪಾಲಿಸಬೇಕು. ವೈದ್ಯಕೀಯ ಅಥವಾ ತುರ್ತು ಅವಶ್ಯಕತೆಗಳಿಗೆ ಹೊರತುಪಡಿಸಿ ಮನೆಯಿಂದ ಹೊರ ಬರಬಾರದು. - ಡಾ.ಪಿ.ಎಸ್.ಹರ್ಷ, ಮಂಗಳೂರು ನಗರ ಪೊಲೀಸ್ ಆಯುಕ್ತ