ಜಿಲ್ಲೆ

ಶ್ರೀ ಕೂಡಲೀ ಶೃಂಗೇರಿ ಮಠದಿಂದ ಅನ್ನದಾಸೋಹ

Chitradurga

ಚಿತ್ರದುರ್ಗ: ಲಾಕ್‌ಡೌನ್ ಸಂದರ್ಭದಲ್ಲಿ ನಗರದ ಶ್ರೀ ಕೂಡಲೀ ಶೃಂಗೇರಿ ಶಾಖಾ ಮಠ ಬಡವರ ಹಸಿವು ತಣಿಸುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದೆ. ಏ.18 ರಿಂದ ಮೇ 3 ರವರೆಗೆ ಜಿಲ್ಲಾಡಳಿತ ಸೂಚಿಸಿರುವ ನಗರದ 4 ಪಾಯಿಂಟ್‌ಗಳಲ್ಲಿ ನಿತ್ಯ ಬೆಳಗ್ಗೆ ಅಂದಾಜು 2000 ಉಪಾಹಾರದ ಪ್ಯಾಕೆಟ್‌ಗಳನ್ನು ಬಡವರಿಗೆ ವಿತರಿಸಲಾಗುತ್ತಿದೆ.

ಇದೇ ವೇಳೆ ಚೆಕ್‌ಪೋಸ್ಟ್‌ಗಳಲ್ಲಿ ಕಾರ‌್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ನೀರು ವಿತರಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಶ್ರೀ ಮಠದ ಆವರಣದಲ್ಲಿ ಬೆಳಗ್ಗೆ 6.30 ರ ಹೊತ್ತಿಗೆ ಉಪಾಹಾರ ಸಿದ್ಧಪಡಿಸಿ ಬೆಳಗ್ಗೆ 9 ರೊಳಗೆ ಆಯ್ದ ಜಾಗಗಳಿಗೆ ತಲುಪಿಸಲಾಗುತ್ತಿದೆ. ಈ ಅನ್ನದಾಸೋಹಕ್ಕೆ ನಗರದ ಹಾಗೂ ಬೆಂಗಳೂರಿನ ಭಕ್ತರು ಸಹ ಕೈ ಜೋಡಿಸಿದ್ದಾರೆ.

ಕೂಡಲೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಅವರ ಸೂಚನೆಯಂತೆ ಕಾರ‌್ಯಕಾರಿ ಸಮಿತಿ ಅಧ್ಯಕ್ಷ ಸತೀಶ್ ಶರ್ಮ ಹಾಗೂ ಪದಾಧಿಕಾರಿಗಳ ಸಹಕಾರದೊಂದಿಗೆ ಈ ಕಾರ್ಯ ನೆರವೇರಿಸಲಾಗುತ್ತಿದೆ ಎಂದು ಮಠದ ಕಾರ‌್ಯದರ್ಶಿ ಎಚ್.ಎಸ್. ಕೇಶವಪ್ರಸಾದ್ ತಿಳಿಸಿದ್ದಾರೆ.