ಜಿಲ್ಲೆ

ಪೂಜೆ ಸಲ್ಲಿಸಿ ಬಸ್ ಸಂಚಾರಕ್ಕೆ ಚಾಲನೆ

Vijayapura

ಬಸವನಬಾಗೇವಾಡಿ: ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ರಸ್ತೆಗಿಳಿಯದ ಬಸ್‌ಗಳು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಸಂಚಾರ ಆರಂಭಿಸಿದ್ದು, ಸ್ಥಳೀಯ ಬಸ್ ನಿಲ್ದಾಣದಲ್ಲಿ ಬಸ್‌ಗೆ ಘಟಕ ವ್ಯವಸ್ಥಾಪಕ ವಿನಾಯಕ ಸಾಲಿಮಠ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೆಲ ಷರತ್ತುಗಳಿಗೆ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಿದ್ದು, ಪರಸ್ಪರ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಒಂದು ಬಸ್‌ನಲ್ಲಿ ಕೇವಲ 30 ಜನ ಪ್ರಯಾಣಿಸಬೇಕು. ಚಾಲಕ-ನಿರ್ವಾಹಕರು ಸೌಜನ್ಯದೊಂದಿಗೆ ವರ್ತಿಸುವ ಜತೆಗೆ ಪ್ರಯಾಣಿಕರಿಂದ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಇಲ್ಲವೇ ಆಧಾರ್ ನಂಬರ್ ಹಾಗೂ ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು. ಮಾಸ್ಕ್ ಧರಿಸಿದರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಬೇಕು. ಯಾವುದೇ ತೆರನಾಗಿ ಗದ್ದಲವಾಗದಂತೆ ನಿಗಾವಹಿಸಬೇಕು. ಕರೊನಾ ವೈರಸ್ ಲಕ್ಷಣಗಳು ಕಂಡು ಬಂದಲ್ಲಿ ಮೇಲಧಿಕಾರಿಗಳಿಗೆ ಅಥವಾ ಆರೋಗ್ಯ ಇಲಾಖೆ ಸಿಬ್ಬಂದಿಗೆ ತಕ್ಷಣ ಮಾಹಿತಿ ನೀಡಬೇಕು. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಓಡಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಪಾರುಪತ್ತೇದಾರ ಎಚ್.ಬಿ. ನಧಾಪ್, ಸಂಚಾರಿ ನಿರೀಕ್ಷಕ ನಿಂಗನಗೌಡ ಬಿರಾದಾರ, ಎಸ್.ಬಿ. ಪಾಟೀಲ, ಭೀಮು ಗುಳೇದ, ಎಂ.ಎಂ. ತೆಲಗಿ, ಧೀರು ಪವಾರ, ಎಲ್.ಬಿ. ಗಂಜಾಳ, ಅವ್ವಣ್ಣ ಕಡಗೋಲ, ಎಸ್.ಎಚ್. ಮಾಳಜಿ, ಎಸ್.ಜಿ. ಸಜ್ಜನ, ಚನ್ನಪ್ಪ ಕೆಳಗೇರಿ ಇದ್ದರು.