ಕೋಲಾರ: ಕರೊನಾ ಸೋಂಕಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಕರೊನಾ ಮಹಾಮಾರಿ ನಗರ ಪ್ರದೇಶದ ಜತೆಗೆ ಗ್ರಾಮೀಣ ಭಾಗಕ್ಕೂ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಲಾಕ್‌ಡೌನ್‌ಗೆ ಜನತೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಶನಿವಾರ ಸಂಜೆ 8ರಿಂದ ಎಂದಿನಂತೆ ಕರ್ಫ್ಯೂ ಚಾಲ್ತಿಗೆ ಬಂದಿತ್ತು. ಅಂಗಡಿ ಮುಂಗಟ್ಟು ಮುಚ್ಚಿದ್ದ ವ್ಯಾಪಾರಸ್ಥರು ಭಾನುವಾರ ಅಂಗಡಿಗಳ ಬಾಗಿಲು ತೆರೆದಿರಲಿಲ್ಲ. ಅಲ್ಲೊಂದು ಇಲ್ಲೊಂದು ದಿನಸಿ ಅಂಗಡಿ ತೆರೆಯಲಾಗಿತ್ತು. ಔಷಧಾಲಯ, ನಂದಿನಿ ಪಾರ್ಲರ್, ಹಣ್ಣು ತರಕಾರಿ ಅಂಗಡಿ, ಮಾಂಸದಂಗಡಿಗಳು ತೆರೆದಿದ್ದವು. ಆಸ್ಪತ್ರೆಗಳಲ್ಲಿ ತುರ್ತು ಸೇವೆ ಲಭ್ಯವಿತ್ತು.
ನಗರದ ಜನನಿಬಿಡ ಎಂಜಿ ರಸ್ತೆ, ದೊಡ್ಡಪೇಟೆ, ಕಾಳಮ್ಮ ಗುಡಿ ಬೀದಿ, ಅಮ್ಮವಾರಿಪೇಟೆ, ಬಸ್ ನಿಲ್ದಾಣ ವೃತ್ತಗಳು ಬಿಕೋ ಎನ್ನುತ್ತಿದ್ದವು. ಕ್ಲಾಕ್ ಟವರ್ ಭಾಗದಲ್ಲೂ ಮೌನ ಕಂಡು ಬಂತು.
ಕೆಎಸ್‌ಆರ್‌ಟಿಸಿ ಬಸ್‌ಗಳು ಡಿಪೋ ಬಿಟ್ಟು ಹೊರಬರದಿದ್ದರಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಆಟೋ, ಟ್ಯಾಕ್ಸಿ ಕಾರುಗಳ ಸಂಚಾರ ಇರಲಿಲ್ಲವಾದರೂ ಆಸ್ಪತ್ರೆ ಇನ್ನಿತರ ತುರ್ತು ಸಂಚಾರದ ನೆಪದಲ್ಲಿ ಖಾಸಗಿ ವಾಹನಗಳ ಓಡಾಟ ಕಂಡುಬಂತು. ಬೈಕುಗಳ ಓಡಾಟಕ್ಕೆ ಅಡ್ಡಿ ಕಂಡುಬರದಿದ್ದರೂ ಸಂಚಾರದ ಪ್ರಮಾಣ ಕಡಿಮೆ ಇತ್ತು. ಮಾಂಸದ ವ್ಯಾಪಾರ ಜೋರಾಗಿತ್ತು.
ಫೀಲ್ಡಿಗಿಳಿದ ಎಎಸ್ಪಿ: ಲಾಕ್‌ಡೌನ್ ನಡುವೆಯೂ ಬೆಳಗ್ಗೆಯೇ ನಗರದಲ್ಲಿ ಸಕಾರಣ ಇಲ್ಲದೆ ಓಡಾಡುತ್ತಿದ್ದ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ ಎಎಸ್ಪಿ ಜಾಹ್ನವಿ, ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ಎಚ್ಚರಿಕೆ ನೀಡಿ ನಿಯಮ ಉಲ್ಲಂಘಿಸಿದವರಿಗೆ ಬುದ್ಧಿವಾದ ಹೇಳಿದರು.
ದರ್ಶನ ಭಾಗ್ಯ ಇಲ್ಲ: ಭಾನುವಾರ ಸಂಪೂರ್ಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನ ಕಲ್ಪಿಸುವ ವ್ಯವಸ್ಥೆ ನಿಷೇಧಿಸಿದ್ದರಿಂದ ದೇವರ ದರ್ಶನ ಭಾಗ್ಯ ಸಿಗಲಿಲ್ಲ. ಇಲಾಖೆ ವ್ಯಾಪ್ತಿಯ ಹೊರಗಿರುವ ಸಾಯಿಬಾಬಾ ಸೇರಿ ಇತರ ದೇವಾಲಯಗಳಲ್ಲಿ ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ಬೆಳಗಿನ ಪೂಜೆ ಮುಗಿದ ನಂತರ ಬಾಗಿಲು ಮುಚ್ಚಲಾಯಿತು.
ಟೊಮ್ಯಾಟೊ ಭಾರೀ ಆವಕ: ಎಪಿಎಂಸಿ ವಹಿವಾಟಿಗೆ ವಿನಾಯಿತಿ ನೀಡಿದ್ದರಿಂದ ರೈತರು ತರಕಾರಿಗಳನ್ನು ಎಪಿಎಂಸಿಗೆ ತಂದಿದ್ದರು. ಪ್ರಸ್ತುತ ಟೊಮ್ಯಾಟೊ ಹಂಗಾಮು ಶುರುವಾಗಿದ್ದು, ಒಂದೇ ದಿನ 21,109 ಕ್ವಿಂಟಾಲ್ ಟೊಮ್ಯಾಟೊ ಆವಕ ಆಗಿದ್ದರಿಂದ ಕಾಲಿಡಲೂ ಜಾಗ ಇಲ್ಲದಂತೆ ಎಲ್ಲೆಲ್ಲೂ ಟೊಮ್ಯಾಟೊ ತುಂಬಿದ್ದ ಬಾಕ್ಸ್‌ಗಳು, ಲಾರಿ, ಟೆಂಪೋಗಳು ತುಂಬಿ ಟ್ರಾಫಿಕ್ ಜಾಮ್ ಆಗಿತ್ತು. ನಾಟಿ ಟೊಮ್ಯಾಟೊ 15 ಕೆಜಿ ಬಾಕ್ಸ್‌ಗೆ 620 ರೂ.ಗೆ ಹರಾಜು ಕಂಡರೆ ಸೀಡ್ಸ್ 500 ರೂ. ಮೇಲ್ಪಟ್ಟು ಹರಾಜು ಕಂಡಿದೆ. ಲಾಕ್‌ಡೌನ್ ಎಫೆಕ್ಟ್ ಬೆಲೆ ಮೇಲೆ ಬಿದ್ದಿರಲಿಲ್ಲವಾದ್ದರಿಂದ ರೈತರಿಗೆ ಉತ್ತಮ ಧಾರಣೆ ಸಿಕ್ಕಿದೆ. ಇದೇ ರೀತಿ ಶ್ರೀನಿವಾಸಪುರದಲ್ಲಿ 4831 ಕ್ವಿಂಟಾಲ್ ಮಾವಿನಹಣ್ಣು ಆವಕ ಆಗಿದೆ.