ಜಿಲ್ಲೆ

ಟಾರ್​ ಮಿಕ್ಸಿಂಗ್​ ಘಟಕಕ್ಕೆ ಬೀಗ

ರೇಷ್ಮೆ ನಗರ ಡೆಸ್ಕ್

ಬಿಡದಿ: ಜನರಿಗೆ ತೊಂದರೆಯಾಗುತ್ತಿರುವ ದೂರಿನ ಮೇರೆಗೆ ಟಾರ್​ ಮಿಕ್ಸಿಂಗ್​ ಟಕಗಳಿಗೆ ಜಿಲ್ಲಾಧಿಕಾರಿ ಆದೇಶದಂತೆ ತಾಲೂಕು ಆಡಳಿತ ಬೀಗ ಜಡಿದಿದೆ.

ಬಿಡದಿ ಪುರಸಭೆ ವ್ಯಾಪ್ತಿಯ ಹೆಗ್ಗಡಗೆರೆ ಗ್ರಾಮದ ಬಳಿ ತಲೆ ಎತ್ತಿದ್ದ ಟಾರ್​ ಮಿಕ್ಸಿಂಗ್​ ಟಕಗಳಿಂದ ಹಲವು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು. ಜನರಲ್ಲದೆ ಜಾನುವಾರುಗಳಿಗೂ ಇದು ಮಾರಕವಾಗಿ ಪರಿಣಮಿಸಿತ್ತು. ಈ ಹಿನ್ನೆಲೆಯಲ್ಲಿ ಎರಡು ಟಕಗಳನ್ನು ಬಂದ್​ ಮಾಡಲಾಗಿದೆ.

ಪರವಾನಗಿ ಇಲ್ಲದೆ ಟಕ ಸ್ಥಾಪನೆ: ಹೆಗ್ಗಡಗೆರೆ ಗ್ರಾಮದ ಸರ್ವೇ ನಂಬರ್​ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಟಕಗಳನ್ನು ಅಕ್ಕ ಪಕ್ಕದಲ್ಲೆ ನಿರ್ಮಾಣ ಮಾಡಿಕೊಳ್ಳಲಾಗಿತ್ತು. 8 ವರ್ಷಗಳಿಂದ ನಾಲ್ಕು ಟಕಗಳು ಕಾರ್ಯ ನಿರ್ವಹಿಸುತ್ತಿದ್ದವು. ಟಾರ್​ ಉತ್ಪನ್ನ ಸಿದ್ಧಪಡಿಸಿ ಬೇರೆ ಸ್ಥಳಗಳಿಗೆ ಸಾಗಾಟ ಮಾಡಲಾಗುತಿತ್ತು. ಆದರೆ, ಈ ಟಕಗಳ ಸ್ಥಾಪನೆಗೆ ಯಾವುದೇ ಪರವಾನಗಿ ಪಡೆದಿರಲಿಲ್ಲ. ಬದಲಿಗೆ ಪ್ರಭಾವ ಬಳಸಿ ಟಕ ಕಾರ್ಯಾಚರಣೆ ನಡೆಸುತ್ತಿದ್ದವು ಎನ್ನಲಾಗಿದೆ.

ಜನ ಜಾನುವಾರುಗಳಿಗೆ ತೊಂದರೆ: ಗ್ರಾಮದ 300 ಮೀಟರ್​ ಕೂಗಳತೆ ದೂರದಲ್ಲೇ ಟಕಗಳು ಕಾರ್ಯ ನಿರ್ವಹಿಸುತ್ತಿದ್ದವು. ಇದರಿಂದ ಜನರಲ್ಲದೆ ಜಾನುವಾರುಗಳಿಗೂ ಸಮಸ್ಯೆಯಾಗಿತ್ತು. ಟಕಗಳಿಂದ ದಟ್ಟ ಹೊಗೆ, ವಾಸನೆ ಹೊರ ಬರುತಿತ್ತು. ಈ ಹೊಗೆ ಸೇವನೆಯಿಂದ ಶ್ವಾಸಕೋಶದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಚರ್ಮ ಸಂಬಂಧಿಸಿದ ಕಾಯಿಲೆಗಳು ಜನರನ್ನು ಬಿಟ್ಟು ಬಿಡದೆ ಕಾಡುತ್ತಿದ್ದವು.

ಇನ್ನೂ ಹೊಗೆಯಿಂದ ಹೊರ ಬರುತ್ತಿದ್ದ ಕಿಟ್ಟ ಮೇವಿನ ಮೇಲೆ ಬಂದು ಬೀಳುತಿತ್ತು. ಇದನ್ನ ತಿಂದ ಜಾನುವಾರುಗಳಿಗೆ ಕಾಯಿಲೆ ಬಂದು ಅನೇಕ ಜಾನುವಾರು ಮೃತಪಟ್ಟಿರುವ ಉದಾಹರಣೆಗಳಿವೆ. ಮಾವಿನ ಫಸಲು, ತೆಂಗು ಬೆಳೆಗಳ ಮೇಲೆ ಪರಿಣಾಮ ಬೀರುತಿತ್ತು. ಮಾವಿನ ಮರಗಳು ಹೂವು ಬೀಡುತ್ತಿದ್ದಂತೆ ಉದುರುತ್ತಿದ್ದ ದೂರುಗಳಿದ್ದವು.

ಡಿಸಿ ಹಾಗೂ ತಹಸೀಲ್ದಾರ್​ಗೆ ದೂರು: ಟಾರ್​ ಟಕಗಳಿಂದ ಉಂಟಾಗುತ್ತಿದ್ದ ಸಮಸ್ಯೆ ಬಗ್ಗೆ ಗ್ರಾಮಸ್ಥರು ಟಕಗಳ ಮಾಲೀಕರ ಜತೆಗೆ ಸಮಸ್ಯೆ ಬಗ್ಗೆ ಹೇಳಿಕೊಂಡಾಗ ಉಡಾಫೆ ಉತ್ತರ ನೀಡಿ ದಬ್ಬಾಳಿಕೆ ಮಾಡಿದ್ದರು.

ಪರವಾನಗಿ ಪಡೆಯದೆ ಟಕಗಳನ್ನು ನಡೆಸುತ್ತಿರುವುದು ತಿಳಿದ ಮೇಲೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳು, ತಹಸೀಲ್ದಾರ್​ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಹಾಗೂ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು.

ಪರಿಶೀಲನೆ ವೇಳೆ ಪರವಾಗಿ ಇಲ್ಲದಿರುವುದು ಕಂಡು ಬಂದಿತ್ತು. ಈ ಸಂಬಂಧ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಕೆ ಮಾಡಿದ್ದರು. ಅಕ್ರಮವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಾಲ್ಕು ಟಕಗಳನ್ನು ಬಂದ್​ ಮಾಡಿ ಎಂದು ಡಿಸಿ ಆದೇಶ ಮಾಡಿದ್ದರು. ಈ ಮೇರೆಗೆ ಮಂಗಳವಾರ ಪುರಸಭಾ ಅಧಿಕಾರಿಗಳು, ಉಪ ತಹಸೀಲ್ದಾರ್​ ಮಲ್ಲೆಶ್​ ಹಾಗೂ ಬಿಡದಿ ಪೊಲೀಸರ ಸಹಕಾರದಿಂದ ಎರಡು ಟಕಗಳಿಗೆ ಬೀಗ ಜಡಿದಿದ್ದಾರೆ.

ಪ್ರಭಾವಿಗಳ ಟಕಕ್ಕೆ ಬೀಗ ಇಲ್ಲ!: ಎರಡು ಟಕ ಬಂದ್​ ಮಾಡಿ, ಪ್ರಭಾವಿಯ ಎರಡು ಟಕಗಳಿಗೆ ಬೀಗ ಹಾಕಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನಮ್ಮ ಜಮೀನುಗಳ ಪಕ್ಕದಲ್ಲಿ ನಿರ್ಮಾಣವಾಗಿದ್ದ ಟಾರ್​ ಟಕಗಳಿಂದ ತೋಟಗಳಿಗೆ, ಜಾನುವಾರುಗಳಿಗೆ ಸಮಸ್ಯೆ ಉಂಟಾಗುತಿತ್ತು. ಈ ಬಗ್ಗೆ ಹೋರಾಟಕ್ಕೆ ಇಳಿದು ದಾಖಲೆ ಸಮೇತ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಪರಿಣಾಮ 4 ಟಕಗಳಿಗೂ ಬೀಗ ಹಾಕುವಂತೆ ಆದೇಶಿಸಿದ್ದಾರೆ. ಆದರೆ, ಅಧಿಕಾರಿಗಳು ಎರಡು ಟಕಗಳಿಗೆ ಮಾತ್ರ ಬೀಗ ಹಾಕಿದ್ದಾರೆ. ಇದರ ಹಿಂದಿನ ಸತ್ಯ ಏನೆಂದು ತಿಳಿಯದಾಗಿದೆ. ಅಧಿಕಾರಿಗಳನ್ನು ಕೇಳಿದರೆ ಪರವಾನಗಿ ಪಡೆಯಲು ಕಾಲಾವಕಾಶ ನೀಡಲಾಗಿದೆ ಎಂದು ಹೇಳುತ್ತಾರೆ. > ಹೇಮಂತ್​ ಕುಮಾರ್​, ಹೋರಾಟಗಾರ