ಕೆ.ಎಂ.ದೊಡ್ಡಿ: ವೈಯಕ್ತಿಕ ಪ್ರತಿಷ್ಠೆಗಾಗಿ ತಾಲೂಕಿನ ಪ್ರಸಿದ್ಧ ದೊಡ್ಡ ಅರಸಿನಕೆರೆ ಗ್ರಾಮದ ಸಣ್ಣಕ್ಕಿರಾಯ ದೇವಾಲಯದ ಬಸಪ್ಪ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಗೌಡ, ಬಸಪ್ಪನ ಮನೆ ನನಗೆ ಸೇರಿದ್ದು ಎಂದು ಬೀಗ ಜಡಿದಿರುವ ಪರಿಣಾಮ ಈ ದುಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಜಯಪ್ರಕಾಶ್ ಗೌಡ ನೇತೃತ್ವದಲ್ಲಿ ಆರಂಭದಲ್ಲಿ ಸಣ್ಣಕ್ಕಿರಾಯಸ್ವಾಮಿ ಅಭಿವೃದ್ಧಿ ಟ್ರಸ್ಟ್ ರಚಿಸಿ, ದೇವಾಲಯವನ್ನು ಅಭಿವೃದ್ಧಿಪಡಿಸಲಾಗಿತ್ತು. ದೇವಾಲಯದ ಬಸವ ವಿವಿಧ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿ ಪಡೆದ ಹಿನ್ನೆಲೆಯಲ್ಲಿ ದಾನಿಯೊಬ್ಬರು ಬಸಪ್ಪನ ಮನೆ ನಿರ್ಮಾಣ ಮಾಡಲು ನಿವೇಶನ ನೀಡಿದ್ದರು. ಅದನ್ನು ಟ್ರಸ್ಟ್‌ನ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಗೌಡರ ಹೆಸರಿಗೆ ಖಾತೆ ಮಾಡಿಸಿದ್ದರು.
ಕಾಲಕ್ರಮೇಣ ಸಮಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರ ನಡುವೆ ಭಿನ್ನಾಭಿಪ್ರಾಯ ಮೂಡಿದ ಪರಿಣಾಮ ಜಯಪ್ರಕಾಶ್ ಗೌಡ ಮತ್ತು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ ಅವರು ಸೇರಿ ಬಸಪ್ಪನ ಮನೆಗೆ ಬೀಗ ಜಡಿದಿದ್ದರು. ಈ ಸಂಬಂಧ ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿ, ಬಸಪ್ಪನ ಮನೆಯನ್ನು ಗ್ರಾಮಸ್ಥರು ಸಣ್ಣಕ್ಕಿರಾಯ ಸ್ವಾಮಿ ಬಸಪ್ಪ ಸೇವಾ ಸಮಿತಿ ವಶಕ್ಕೆ ನೀಡಿ ಎಂಬುವುದು ಗ್ರಾಮಸ್ಥರ ವಾದವಾಗಿದೆ.
ಭಾನುವಾರ ಬಸಪ್ಪ ಪೂಜಾ ಕಾರ್ಯ ನಿಮಿತ್ತ ಮೈಸೂರಿಗೆ ತೆರಳಿತ್ತು. ಅದು ವಾಪಸ್ ಬರುವ ವೇಳೆಗೆ ಜಯಪ್ರಕಾಶ್ ಗೌಡ ಬಸಪ್ಪನ ಮನೆಗೆ ಬೀಗ ಹಾಕಿ ಮತ್ತೆ ಕಿರಿಕ್ ಶುರು ಮಾಡಿದ್ದಾರೆ. ಪರಿಣಾಮ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.