ಮಂಗಳೂರು: ದ.ಕ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಜು.15ರಂದು ರಾತ್ರಿ 8 ಗಂಟೆಯಿಂದ 23ರ ಬೆಳಗ್ಗೆ 5ರವರೆಗೆ 7 ದಿನಗಳ ಲಾಕ್‌ಡೌನ್‌ನ ವಿಸ್ತೃತ ಮಾರ್ಗಸೂಚಿಯನ್ನು ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಹೊರಡಿಸಿದ್ದಾರೆ.
ರಾಜ್ಯ- ಕೇಂದ್ರ ಸರ್ಕಾರದ ಕಚೇರಿಗಳು, ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮಗಳು ಮುಚ್ಚಬೇಕು. ಪಡಿತರ, ದಿನಸಿ, ತರಕಾರಿ, ಹಣ್ಣಿನಂಗಡಿಗಳಿಗೆ ಬೆಳಗ್ಗೆ 8ರಿಂದ 11ರ ವರೆಗೆ ಅವಕಾಶವಿದೆ. ಕೆಎಸ್ಸಾರ್ಟಿಸಿ, ಖಾಸಗಿ ಬಸ್, ಆಟೋ ರಿಕ್ಷಾ, ಕ್ಯಾಬ್ ಮತ್ತು ಖಾಸಗಿ ವಾಹನ ಸಂಚಾರಕ್ಕೆ ನಿಷೇಧವಿದೆ. ತುರ್ತು ಸಂದರ್ಭ ಮಾತ್ರ ಪ್ರಯಾಣಿಕ ವಾಹನಗಳ ಸಂಚಾರ, ವೈದ್ಯಕೀಯ ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್ ನೀಡಬಹುದು.
ಚಿತ್ರಮಂದಿರ, ಶಾಪಿಂಗ್ ಮಾಲ್, ಜಿಮ್, ಕ್ರೀಡಾ ಸಂಕೀರ್ಣ, ಸ್ಟೇಡಿಯಂ, ಈಜುಕೊಳ, ಮನರಂಜನಾ ಪಾರ್ಕ್, ರಂಗಮಂದಿರ, ಬಾರ್, ಸಭಾಂಗಣ ಇತ್ಯಾದಿ ನಿಷೇಧಿಸಿದೆ. ಯಾವುದೇ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ. ಧಾರ್ಮಿಕ ಸ್ಥಳ, ಪೂಜಾ ಸ್ಥಳಕ್ಕೆ ಭೇಟಿ ನಿಷೇಧವಿರುತ್ತದೆ. ಶಾಲಾ ಕಾಲೇಜು, ಶಿಕ್ಷಣ ತರಬೇತಿ, ಕೋಚಿಂಗ್ ಮುಚ್ಚಬೇಕು, ಆನ್‌ಲೈನ್, ದೂರಶಿಕ್ಷಣಕ್ಕೆ ಅವಕಾಶ ಮುಂದುವರಿಸಬೇಕು. ಈಗಾಗಲೇ ವೇಳಾಪಟ್ಟಿ ನಿಗದಿಯಾದ ಪರೀಕ್ಷೆಗಳಿಗೆ ಕೋವಿಡ್ ನಿರ್ವಹಣಾ ಷರತ್ತುಗಳಿಗೊಳಪಟ್ಟು ಅನುಮತಿ ಇದೆ. ಕಂಟೇನ್ಮೆಂಟ್ ವಲಯಗಳಲ್ಲಿ ಅತ್ಯಗತ್ಯ ಚಟುವಟಿಕೆಗೆ ಮಾತ್ರ ಅವಕಾಶವಿದೆ. ವೈದ್ಯಕೀಯ ತುರ್ತುಸೇವೆ, ಅಗತ್ಯ ಸರಕು ಹೊರತುಪಡಿಸಿ ಈ ವಲಯಗಳಲ್ಲಿ ವ್ಯಕ್ತಿಗಳ ಚಲನೆಗೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ.
ಲಾಕ್‌ಡೌನ್ ನಿಯಮ ಉಲ್ಲಂಘಿಸುವ ವ್ಯಕ್ತಿಯ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯನ್ವಯ ಕ್ರಮ ಜರಗಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ವಿನಾಯಿತಿಗಳು: ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ದೂರಸಂಪರ್ಕ, ಅಗ್ನಿಶಾಮಕ, ಮಹಾನಗರಪಾಲಿಕೆ, ವಿದ್ಯುತ್, ನೀರು, ನೈರ್ಮಲ್ಯ ಇತ್ಯಾದಿ ಅಗತ್ಯಸೇವೆ ಕಚೇರಿಗಳು, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಜಿಲ್ಲಾಧಿಕಾರಿ ಕಚೇರಿ, ಅಧೀನ ಕಚೇರಿಗಳು, ಖಜಾನೆ, ಕೋರ್ಟ್ ಮತ್ತು ಕೋರ್ಟ್ ಕೆಲಸಕ್ಕೆ ಸಂಬಂಧಿಸಿದ ಕಚೇರಿಗಳು, ಕೋವಿಡ್ ಕಾರ್ಯಕ್ಕೆ ನಿಯೋಜಿಸಿದ ಕಚೇರಿಗಳು-ಸಿಬ್ಬಂದಿ, ಅಂಚೆ ಕಚೇರಿ, ವಿಮಾನ ನಿಲ್ದಾಣ- ಭೂಗಡಿಗಳಲ್ಲಿ ಕಾರ್ಯನಿರ್ವಹಿಸುವ ಕಸ್ಟಂಸ್, ಬ್ಯಾಂಕ್, ಆರ್‌ಬಿಐ ಮತ್ತು ಆರ್‌ಬಿಐ ನಿಯಂತ್ರಿತ ಹಣಕಾಸು ಮಾರುಕಟ್ಟೆ, ಆಸ್ಪತ್ರೆ, ನರ್ಸಿಂಗ್ ಹೋಂ, ಕ್ಲಿನಿಕ್, ಲ್ಯಾಬ್, ಸಂಗ್ರಹಣಾ ಕೇಂದ್ರ, ಡಿಸ್ಪೆನ್ಸರಿ, ಫಾರ್ಮಸಿ, ಜನೌಷಧಿ ಕೇಂದ್ರ, ಗೃಹ ಆರೈಕೆದಾರರು, ವೈದ್ಯಕೀಯ ಉಪಕರಣದ ಅಂಗಡಿ ಸೇರಿದಂತೆ ಆರೋಗ್ಯ ಸೇವೆಯ ಎಲ್ಲ ವಿಭಾಗಗಳು, ಸರಕು ವಾಹನ, ಟ್ರಕ್, ರೈಲು, ವಿಮಾನ ಮೂಲಕ ಎಲ್ಲ ಬಗೆಯ ಸರಕು ಸಾಗಾಟ, ಕೃಷಿ ಹಾಗೂ ಸಂಬಂಧಿತ ಚಟುವಟಿಕೆ, ಕ್ಷೀರ ಸಂಸ್ಕರಣಾ ಕೇಂದ್ರಗಳಿಂದ ಸಾರಿಗೆ ಮತ್ತು ಪೂರೈಕೆಯನ್ನೊಳಗೊಂಡಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಸ್ಕರಣೆ, ವಿತರಣೆ ಮತ್ತು ಮಾರಾಟ, ಆಶ್ರಮ-ಪಾಲನಾ ಕೇಂದ್ರಗಳು, ಪಿಂಚಣಿ- ಭವಿಷ್ಯ ನಿಧಿ ಸೇವೆಗಳು.