ಬಳ್ಳಾರಿ: ಕರೊನಾ, ಲಾಕ್‌ಡೌನ್ ಕಾರಣಕ್ಕೆ ಅಗತ್ಯ ವಸ್ತುಗಳ ದರವನ್ನು ಮನಸೋ ಇಚ್ಛೆ ಏರಿಸಿದರೆ ಜಿಲ್ಲಾಡಳಿತ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಅಂಗಡಿ ಮಾಲೀಕರಿಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಎಚ್ಚರಿಕೆ ನೀಡಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಅಗತ್ಯ ವಸ್ತುಗಳ ಸಂಗ್ರಹ, ಸಾಗಣೆ ಹಾಗೂ ಇತರ ವಿಷಯಗಳ ಕುರಿತು ಶುಕ್ರವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಗತ್ಯ ವಸ್ತುಗಳ, ದಾಸ್ತಾನು ಮತ್ತು ಸಾಗಣೆ ವಿಷಯದಲ್ಲಿ ಸರ್ಕಾರ ನೀಡಿರುವ ವಿನಾಯಿತಿಯನ್ನು ಉಲ್ಲಂಘಿಸಿದರೆ ಪ್ರಕರಣ ದಾಖಲಿಸಲಾಗುವುದು. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 7ರಿಂದ 11 ರವರೆಗೆ ಹಾಗೂ ಸಂಜೆ 5ರಿಂದ 7ರವರೆಗೆ ಅವಕಾಶ ನೀಡಿದ್ದು, ಗ್ರಾಹಕರು ಅಂತರ ಕಾಯ್ದುಕೊಳ್ಳುವಂತೆ ಮಾರ್ಕಿಂಗ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಟ್ರಾನ್ಸಪೋರ್ಟ್ ಮತ್ತು ಗೂಡ್ಸ್ ವಾಹನಗಳಿಗೆ ಯಾವುದೇ ಸಮಸ್ಯೆ ಇಲ್ಲ. ಅಗತ್ಯ ವಸ್ತುಗಳ ಅಂಗಡಿ ಮಾಲೀಕರು ವಿನಾಯಿತಿ ನೀಡಲಾದ ಅವಧಿಯಲ್ಲಿ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳಬಹುದು ಎಂದು ಅಂಗಡಿ ಮಾಲೀಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಜತೆಗೆ ವಾಹನಗಳ ಸಂಚಾರಕ್ಕೂ ಸಾಮಾಜಿಕ ಅಂತರ ಪಾಲಿಸಬೇಕು. ಈ ಬಗ್ಗೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಆಹಾರ ಇಲಾಖೆ ಜಂಟಿ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಮಾತನಾಡಿ, ಅಗತ್ಯ ವಸ್ತುಗಳ ಉತ್ಪಾದನೆ, ಬೇಡಿಕೆ, ಪೂರೈಕೆ, ದೈನಂದಿನ ವಹಿವಾಟು, ಸಾಗಣೆ ಸೇರಿ ಇತರ ವಿಷಯಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ, ಕೆಎಂಎ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಬುಕ್ಕಾ ಹಾಗೂ ಅಂಗಡಿ ಮಾಲೀಕರು, ವಿತರಕರು ಇದ್ದರು.
6 ಜನರ ವಿರುದ್ಧ ಕೇಸ್
ಮೊಳಕಾಲ್ಮೂರು ಚೆಕ್‌ಪೋಸ್ಟ್‌ನಲ್ಲಿ ಆಂಬುಲೆನ್ಸ್ ತಪಾಸಣೆ ನಡಸಿದಾಗ 6 ಜನರನ್ನು ಕರೆದೂಯ್ಯತ್ತಿರುವುದು ಬೆಳಕಿಗೆ ಬಂದಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿ ನಕುಲ್ ತಿಳಿಸಿದರು.