ಜಿಲ್ಲೆ

ಅಧಿಕಾರಿಗಳಿಂದ ಪಾಸ್ ದುರುಪಯೋಗ

Udupi

mangalore, udupi, seal down, gangolli, udupi

ಗಂಗೊಳ್ಳಿ: ಉಡುಪಿ ಜಿಲ್ಲೆಯ ಗಡಿ ಭಾಗವನ್ನು ಸೀಲ್‌ಡೌನ್ ಮಾಡಲಾಗಿದ್ದರೂ ಬೇರೆ ಬೇರೆ ಜಿಲ್ಲೆಗಳಿಂದ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಗಂಗೊಳ್ಳಿ ಗ್ರಾಮದಲ್ಲಿ ಆಶಾ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿದಾಗ ಬೇರೆ ಜಿಲ್ಲೆಗಳಿಂದ ಗಂಗೊಳ್ಳಿಗೆ ಬಂದು ವಾಸ್ತವ್ಯ ಮಾಡಿರುವುದು ಬೆಳಕಿಗೆ ಬಂದಿದೆ. ಇವರೆಲ್ಲರೂ ಹೇಗೆ ಬಂದರು ಎಂದು ಗಮನಿಸಿದಾಗ ಹಲವು ಅನುಮಾನಗಳು ಹಾಗೂ ತಮ್ಮ ಗಡಿಯ ಭದ್ರತೆ ನಮ್ಮನ್ನು ಸುತ್ತಿಕೊಳ್ಳುತ್ತಿದೆ. ಬೇರೆ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಲಿ ಅಥವಾ ಇನ್ನಾವುದೇ ಅಧಿಕಾರಿಗಳು ನೀಡಿದ ಶಿಫಾರಸ್ಸು ಪತ್ರಕ್ಕೆ ನಮ್ಮ ಜಿಲ್ಲೆಯಲ್ಲಿ ಬೆಲೆ ಇಲ್ಲ. ತುರ್ತು ಸಂದರ್ಭ ಹೊರತುಪಡಿಸಿ ಬೇರೆ ಯಾರಿಗೂ ಉಡುಪಿ ಜಿಲ್ಲೆ ಪ್ರವೇಶಿಸಲು ಅವಕಾಶ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಹೇಳುತ್ತಿದ್ದರೂ, ಭಟ್ಕಳದ ಉಪವಿಭಾಗಾಧಿಕಾರಿ ಶಿಫಾರಸ್ಸು ಪತ್ರ ಬಳಸಿಕೊಂಡು ಅನೇಕರು ಶಿರೂರು ಗಡಿಯನ್ನು ಮುಕ್ತವಾಗಿ ದಾಟಿ ಬಂದಿರುವುದು ಬೆಳಕಿಗೆ ಬಂದಿದೆ. ಇನ್ನು ಕೆಲವರು ಉಡುಪಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯ ಗುರುತು ಚೀಟಿ ತೋರಿಸಿ ಬರುತ್ತಿದ್ದರೆ, ಇನ್ನು ಕೆಲವು ಸ್ಥಳೀಯ ಪೊಲೀಸ್ ಸಿಬ್ಬಂದಿ ಶಿಫಾರಸ್ಸಿನ ಮೇರೆಗೆ ನಿರ್ಭೀತಿಯಿಂದ ಶಿರೂರು ಗಟಿ ದಾಟಿ ಜಿಲ್ಲೆ ಪ್ರವೇಶಿಸುತ್ತಿದ್ದಾರೆ. ತುರ್ತು ವೈದ್ಯಕೀಯ ಸೇವೆಗೆ ಉಡುಪಿ ಕಡೆಗೆ ಬರುವಾಗ ಆಂಬುಲೆನ್ಸ್ ಅಥವಾ ಯಾವುದೇ ವಾಹನದಲ್ಲಿ ರೋಗಿ ಮತ್ತು ಇನ್ನೊಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದರೂ, ರೋಗಿಗಳೊಂದಿಗೆ ಮೂರ‌್ನಾಲ್ಕು ಜನರಿಗೆ ಪ್ರಯಾಣಿಸಲು ಭಟ್ಕಳದ ಉಪವಿಭಾಗಾಧಿಕಾರಿ ಶಿಫಾರಸ್ಸು ಪತ್ರ ನೀಡುತ್ತಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಅಡ್ಡ ದಾರಿಯಲ್ಲಿ ಪ್ರವೇಶ: ಕೆಲವರು ಅಡ್ಡ ದಾರಿ ಹಿಡಿದು ಉಡುಪಿ ಜಿಲ್ಲೆ ಪ್ರವೇಶಿಸುತ್ತಿದ್ದಾರೆ ಎಂಬ ಕುತೂಹಲಕಾರಿ ಅಂಶ ಬಹಿರಂಗಗೊಂಡಿದೆ. ಶಿರೂರು ಕಡೆಯಿಂದ ಭಟ್ಕಳಕ್ಕೆೆ ಹೋಗುವವರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶಿರೂರು ರೈಲ್ವೆ ನಿಲ್ದಾಣದವರೆಗೆ ಬಂದು, ರೈಲು ನಿಲ್ದಾಣದ ಬಳಿಯಿಂದ ರೈಲು ಹಳಿ ಮೇಲೆ ನಡೆದುಕೊಂಡು ಹೋಗಿ ಶಿರೂರು ಗಡಿ ಮುಗಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಬಳಿ ಬಂದು ಅಲ್ಲಿ ನಿಂತಿರುವ ವಾಹನದಲ್ಲಿ ಭಟ್ಕಳಕ್ಕೆ ತೆರಳುತ್ತಿರುವುದು ಮತ್ತು ಅದೇ ರೀತಿಯಾಗಿ ಉಡುಪಿ ಕಡೆಗೆ ಪ್ರಯಾಣಿಸುತ್ತಿದ್ದಾರೆ. ಇನ್ನು ಕೆಲವರು ಶಿರೂರು ಟೋಲ್ ಗೇಟ್ ಬಳಿ ಬಂದು ಅಲ್ಲಿದ್ದವರ ಕಣ್ಣು ತಪ್ಪಿಕೊಂಡು ಟೋಲ್ ಗೇಟ್ ಬಳಿಯಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ವಾಹನದಲ್ಲಿ ಭಟ್ಕಳ, ಕುಂದಾಪುರ ಕಡೆಗೆ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಜಿಲ್ಲಾಡಳಿತ ಇನ್ನಾದರೂ ಎಚ್ಚರಗೊಂಡು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಮತ್ತೆ ಕರೊನಾ ಭೀತಿ ಜಿಲ್ಲೆಯನ್ನು ಕಾಡಲಿದೆ.

ಬ್ಯಾಂಕ್ ಮತ್ತಿತರ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಶಿರೂರು ಟೋಲ್ ಗೇಟ್ ಮೂಲಕ ಉಡುಪಿ ಜಿಲ್ಲೆಗೆ ಪ್ರವೇಶಿಸಲು ಅವಕಾಶ ಇದೆ. ತುರ್ತು ಸಂದರ್ಭ ಹೊರತುಪಡಿಸಿ ಯಾವುದೇ ವಾಹನಗಳಿಗೆ ಉಡುಪಿ ಗಡಿ ಪ್ರವೇಶಕ್ಕೆ ಅವಕಾಶ ಇಲ್ಲ. ಅಧಿಕಾರಿಗಳ ಕಣ್ಣು ತಪ್ಪಿಸಿ, ಬೇರೆ ಜಿಲ್ಲೆಯ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಉಡುಪಿ ಗಡಿ ಪ್ರವೇಶ ಮಾಡಿರುವುದು ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುವುದು. ಶಿರೂರು ರೈಲ್ವೇ ನಿಲ್ದಾಣದಿಂದ ರೈಲು ಹಳಿ ಮೇಲೆ ನಡೆದುಕೊಂಡು ಭಟ್ಕಳಕ್ಕೆ ಹೋಗಿ ಬರುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುವುದು. ಬಸಪ್ಪ ಪೂಜಾರ್, ತಹಸೀಲ್ದಾರ್, ಬೈಂದೂರು ತಾಲೂಕು