ಜಿಲ್ಲೆ

ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ!

ರೇಷ್ಮೆ ನಗರ ಡೆಸ್ಕ್

ನಿಯಮ ಉಲ್ಲಂಘನೆ ಆರೋಪದಡಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕ್ರಮ

ಬಿಡದಿ: ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್​ ಬೆನ್ನಲ್ಲೇ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಜಾಲಿವುಡ್​ ಸ್ಟುಡಿಯೋಸ್​ಗೆ ಜಿಲ್ಲಾಡಳಿತ ಮಂಗಳವಾರ ಬೀಗ ಜಡಿದಿದೆ. ಇದರೊಂದಿಗೆ ಪ್ರತಿಷ್ಠಿತ ಚಾನಲ್​ ಒಂದರಲ್ಲಿ ಪ್ರಸಾರವಾಗುತ್ತಿದ್ದ ಬಿಗ್​ ಬಾಸ್​ ರಿಯಾಲಿಟಿ ಶೋ ತಾತ್ಕಾಲಿಕ ಬಂದ್​ ಆಗಿದೆ.

ಮಂಗಳವಾರ ರಾಮನಗರ ತಹಸೀಲ್ದಾರ್​ ತೇಜಸ್ವಿನಿ ನೇತೃತ್ವದ ಅಧಿಕಾರಿಗಳ ತಂಡ ಸ್ಟುಡಿಯೋದ ಎಲ್ಲ ನಾಲ್ಕೂ ಪ್ರವೇಶ ದ್ವಾರಗಳಿಗೆ ಬೀಗ ಹಾಕಿ ಸೀಲ್​ ಮಾಡಿದೆ. ಅನುಮತಿ ಪಡೆಯದೆ ಹಾಗೂ ಬಳಕೆಯಾದ ನೀರನ್ನು ಸಂಸ್ಕರಣೆ ಮಾಡದೆ ಹೊರಗೆ ಬಿಡುತ್ತಿದ್ದ ಕ್ರಮ ವಿರೋಧಿಸಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ಅ. 6ರಂದು ವೆಲ್ಸ್​ ಸ್ಟುಡಿಯೋಸ್​ ಮತ್ತು ಎಂಟರ್​ಟೈನ್​ಮೆಂಟ್​ ಪ್ರೆವೇಟ್​ ಲಿಮಿಟೆಡ್​ (ಜಾಲಿವುಡ್​ ಸ್ಟುಡಿಯೋಸ್​ ಮತ್ತು ಅಡ್ವೆಂಚರ್ಸ್​)ಗೆ ನೋಟಿಸ್​ ಜಾರಿ ಮಾಡಿ, ತಕ್ಷಣದಿಂದಲೇ ಕಾರ್ಯ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಎಲ್ಲ ಚಟುವಟಿಕೆ ನಿಲ್ಲಿಸುವಂತೆ ಸೂಚಿಸಿತ್ತು. ನಂತರ ಕಾರ್ಯಾಚರಣೆ ನಡೆಸಿ ಇಡೀ ಸ್ಟುಡಿಯೋ ಬಂದ್​ ಮಾಡಿಸಿದೆ.

ನೋಟಿಸ್​ನಲ್ಲಿ ಏನಿದೆ?

ಸುಮಾರು 35 ಎಕರೆ ವಿಸ್ತೀರ್ಣದಲ್ಲಿರುವ ಈ ಸ್ಟುಡಿಯೋದಲ್ಲಿ ಬಳಕೆ ಮಾಡಿದ ನೀರನ್ನು ಶುದ್ಧೀಕರಣ ಮಾಡಿ ಮರು ಬಳಕೆ ಮಾಡುತ್ತಿಲ್ಲ. ಅಗತ್ಯವಾದ ಒಪ್ಪಿಗೆ ಪಡೆಯದೆಯೇ ಬಳಸಲಾಗುತ್ತಿದೆ ಎಂದು ಮಂಡಳಿ ನೋಟಿಸ್​ನಲ್ಲಿ ಉಲ್ಲೇಖಿಸಿದೆ. ಸಂಸ್ಥೆ ಹಲವು ನಿಯಮ ಉಲ್ಲಂಘನೆ ಮಾಡಿರುವುದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಚಟುವಟಿಕೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಲು ಹಾಗೂ ನಿಗದಿತ ಅವಧಿಯೊಳಗೆ ಕಚೇರಿಗೆ ವಿವರಣೆ ಸಲ್ಲಿಸಲು ಸೂಚಿಸಿದೆ.

ಸ್ಥಳದಲ್ಲಿ ಅಹಿತಕರ ಟನೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಬಂದೋಬಸ್ತ್​ ವ್ಯವಸ್ಥೆ ಮಾಡಿಕೊಡುವಂತೆ ಕಂದಾಯ ಇಲಾಖೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಭದ್ರತೆ ನೀಡಲಾಗಿತ್ತು. |ಆರ್​.ಶ್ರೀನಿವಾಸಗೌಡ ಎಸ್​ಪಿ, ಬೆಂಗಳೂರು ದಣ ಜಿಲ್ಲೆ

ಅಂತಿಮವಾಗಿ ಲಾಕ್​: ಮಂಗಳವಾರ ಮಧ್ಯಾಹ್ನದ ವೇಳೆಗೆ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್​ ನೀಡಲು ಸ್ಟುಡಿಯೋಸ್​ಗೆ ಆಗಮಿಸಿದ್ದರು. ಆದರೆ, ಸಂಸ್ಥೆಯ ಮ್ಯಾನೇಜ್ಮೆಂಟ್​ ನೋಟಿಸ್​ ಪಡೆದುಕೊಂಡಿಲ್ಲ. ಹಾಗಾಗಿ ತಹಸೀಲ್ದಾರ್​ ತೇಜಸ್ವಿನಿ ಸಂಜೆ ವೇಳೆಗೆ ಖುದ್ದಾಗಿ ನೋಟಿಸ್​ ನೀಡಿದರು. ಕಡೆಗೆ ಅಧಿಕಾರಿಗಳ ಮೂಲಕ ಸ್ಟುಡಿಯೋಸ್​ನ ಮುಖ್ಯದ್ವಾರಕ್ಕೆ ಬೀಗ ಹಾಕಿಸಿ ಸೀಲ್​ ಮಾಡಿಸಿದರು. ಬಳಿಕ ರಾತ್ರಿ 7.30ಕ್ಕೆ ಮತ್ತೆರಡು ಗೇಟ್​ಗಳಿಗೆ ಬೀಗ ಜಡಿದರು. 8 ಗಂಟೆ ಸುಮಾರಿಗೆ ಬಿಗ್​ ಬಾಸ್​ ಸ್ಪರ್ಧಿಗಳು ಮತ್ತು ತಂತ್ರಜ್ಞರ ತಂಡವನ್ನು ಹೊರಗೆ ಕಳುಹಿಸಿ, ಮತ್ತೊಂದು ಗೇಟ್​ಗೂ ಬೀಗ ಜಡಿಯಲಾಗಿದೆ.

ನಿಯಮ ಉಲ್ಲಂನೆ ಹಿನ್ನೆಲೆಯಲ್ಲಿ ಜಾಲಿವುಡ್​ ಸ್ಟುಡಿಯೋಸ್​ ಸಂಸ್ಥೆಗೆ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್​ ನೀಡಲಾಗಿತ್ತು. ಜಿಲ್ಲಾಡಳಿತದಿಂದ ನಾವು ನೋಟಿಸ್​ ಕೊಡಲು ಬಂದರೆ ಸ್ವೀಕರಿಸದೆ ಉದ್ಧಟತನ ತೋರಿದ್ದರು. ನೋಟಿಸ್​ ಕೊಟ್ಟು ಬಿಗ್​ ಬಾಸ್​ ಸ್ಪರ್ಧಿಗಳನ್ನ ಹೊರ ಕಳುಹಿಸಿ ಎಲ್ಲ ಗೇಟ್​ಗಳಿಗೂ ಬೀಗ ಹಾಕಿ ಸೀಲ್​ ಮಾಡಲಾಗಿದೆ. |ತೇಜಸ್ವಿನಿ ತಹಸೀಲ್ದಾರ್​, ರಾಮನಗರ