ಜಿಲ್ಲೆ

ಗಾಯಾಳು ವಿದ್ಯಾರ್ಥಿನಿ ನೋವಿಗೆ ಸ್ಪಂದಿಸಿದ ಸಮಾಜ

Dakshina Kannada

ಮಂಗಳೂರು: ಸರ್ಕಾರ, ಅಧಿಕಾರಿ ವರ್ಗ, ಸಮಾಜ ಜತೆಯಾಗಿ ಸಾಗಿದರೆ ಒಳ್ಳೆಯ ಕೆಲಸ ಹೇಗೆ ಸುಗಮವಾಗಿ ನಡೆಯಬಲ್ಲುದು ಎನ್ನುವುದಕ್ಕೆ ಉಳ್ಳಾಲದ ಖಾಸಗಿ ಕಾಲೇಜಿನ ಬಿಬಿಎಂ ವಿದ್ಯಾರ್ಥಿನಿ ದೇವಿಕಾ(18) ಎದುರಿಸಿದ ಪರಿಸ್ಥಿತಿಯೇ ಉತ್ತಮ ನಿದರ್ಶನ.

ದೇವಿಕಾ ಇತರ ಮೂವರು ವಿದ್ಯಾರ್ಥಿನಿಯರು ಕಾಲೇಜಿಗೆ ಸಮೀಪದ ಬಾಡಿಗೆ ಮನೆಯಲ್ಲಿ ಜತೆ ವಾಸವಿದ್ದರು. ಏ.16ರಂದು ಪ್ರಥಮ ಮಹಡಿಯಲ್ಲಿ ಸ್ನೇಹಿತರ ಜತೆ ಹರಟುತ್ತಿದ್ದಾಗ ಆಕಸ್ಮಿಕವಾಗಿ ಮಹಡಿಯಿಂದ ಕೆಳಗೆ ನೆಲಕ್ಕೆ ಬಿದ್ದು ಕಾಲು ಮುರಿಯಿತು. ಸ್ನೇಹಿತೆಯರು ಹತ್ತಿರದ ಖಾಸಗಿ ಆಸ್ಪತ್ರೆಗೆ ವಿದ್ಯಾರ್ಥಿನಿಯನ್ನು ಕರೆದೊಯ್ದಿದ್ದು, ಅಲ್ಲಿ ಎರಡೂ ಕಾಲುಗಳಿಗೆ ಬ್ಯಾಂಡೇಜ್ ಸುತ್ತಿ ಕಳುಹಿಸಿದರು. ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ ದೇವಿಕಾ ಮರುದಿನ ನೋವು ಸಹಿಸಲಾಗದೆ ಕಣ್ಣೀರಿಡುವುದನ್ನು ಕಂಡು ಸ್ನೇಹಿತೆಯರು ಆಕೆ ತಾಯಿಗೆ ಮೊಬೈಲ್ ಮೂಲಕ ವಿಷಯ ತಿಳಿಸಿದ್ದಾರೆ. ಲಾಕ್‌ಡೌನ್ ಕಾರಣ ವಿದ್ಯಾರ್ಥಿನಿಯನ್ನು ಊರು ತಲುಪಿಸುವುದು ಸುಲಭವಿರಲಿಲ್ಲ. ಆಕೆಯ ಸ್ವಂತ ಊರು ಉಳ್ಳಾಲದಿಂದ ಸುಮಾರು 400 ಕಿ.ಮೀ. ದೂರದ ಇಡುಕ್ಕಿ(ಕೇರಳ). ಅವರ ತಂದೆ ನಿಧನರಾಗಿದ್ದು, ಅಂಗನವಾಡಿ ಕಾರ್ಯಕರ್ತೆಯಾಗಿರುವ ತಾಯಿ ಕುಟುಂಬದ ಆಧಾರ ಸ್ತಂಭ.

ನೆರವಿಗೆ ಸರಪಳಿ: ಇಡುಕ್ಕಿ ಪರಿಚಿತರೊಬ್ಬರು ‘ಮಲಯಾಳಂ ಮನೋರಮ’ ಮಂಗಳೂರು ವರದಿಗಾರ ರಾಜೇಶ್ ಕುಮಾರ್ ಕಂಕೊಳ್ ಅವರನ್ನು ಸಂಪರ್ಕಿಸಿ ವಿದ್ಯಾರ್ಥಿನಿಗೆ ಸಹಾಯ ಮಾಡುವಂತೆ ಕೋರಿದ್ದರು. ರಾಜೇಶ್ ವಿದ್ಯಾರ್ಥಿನಿಯನ್ನು ತನ್ನ ಕಾರಿನಲ್ಲಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕರೆದೊಯ್ದು, ಎಕ್ಸೃ್ರೇ, ಇತರ ತಪಾಸಣೆಗೆ ಒಳಪಡಿಸಿದರು. ಒಂದು ಕಾಲಿನ ಎಲುಬಿಗೆ ಅಧಿಕ ಹಾಗೂ ಇನ್ನೊಂದು ಕಾಲಿಗೆ ಸಾಮಾನ್ಯ ಗಾಯವಾಗಿದ್ದು ,ಒಂದು ತಿಂಗಳು ಸ್ವಲ್ಪವೂ ನಡೆಯದೆ ಪೂರ್ಣ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿದರು.

ಪತ್ರಕರ್ತ ರಾಜೇಶ್ ಅವರ ಮಿತ್ರ ಕಾಸರಗೋಡಿನ ಕಂದಾಯ ಅಧಿಕಾರಿ ಸತೀಶ ಮಡಿಕೈ ಅವರು ಇಡುಕ್ಕಿ ಜಿಲ್ಲಾಧಿಕಾರಿ ಎಚ್.ದಿನೇಶ್ ಅವರಲ್ಲಿ ವಿಷಯ ತಿಳಿಸಿ ಸಹಾಯಕ್ಕೆ ಮನವಿ ಮಾಡಿದರು. ಸ್ಥಳೀಯ ಮುಖಂಡರು ಸಮಸ್ಯೆ ಬಗ್ಗೆ ಕೇರಳದ ಇಂಧನ ಸಚಿವ ಎಂ.ಎಂ.ಮಣಿ ಅವರ ಗಮನ ಸೆಳೆದರು. ಸಚಿವರು ಮತ್ತು ಜಿಲ್ಲಾಧಿಕಾರಿಯ ಪೂರ್ಣ ಸಹಕಾರದೊಂದಿಗೆ ವಿದ್ಯಾರ್ಥಿನಿಯನ್ನು ಊರಿಗೆ ತಲುಪಿಸಲು ಯೋಜನೆ ಸಿದ್ಧಪಡಿಸಲಾಯಿತು.

ಸೋಮವಾರ ಮಧ್ಯಾಹ್ನ ದೇವಿಕಾ ಅವರನ್ನು ಮಂಗಳೂರಿನ ಆಂಬುಲೆನ್ಸ್ ಮೂಲಕ ತಲಪಾಡಿಗೆ , ಅಲ್ಲಿಂದ ಕಾಞಂಗಾಡಿನ ಆಂಬುಲೆನ್ಸ್ನಲ್ಲಿ ಇಡುಕ್ಕಿಗೆ ಕಳುಹಿಸಲಾಯಿತು. ಆಂಬುಲೆನ್ಸ್ನಲ್ಲಿ ಇದ್ದವರಿಗೆ ಮೊಗ್ರಾಲ್ ಪುತ್ತೂರಿನಲ್ಲಿ ಸ್ಥಳೀಯ ವೈದ್ಯ ಡಾ.ಶಾಕೀರ್ ಲಘು ಉಪಹಾರ ಮತ್ತು ಕಾಞಂಗಾಡ್‌ನಲ್ಲಿ ನಗರಸಭಾ ಅಧ್ಯಕ್ಷ ವಿ.ವಿ.ರಮೇಶ್ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದರು.