ಆನೇಕಲ್ : ಚಂದಾಪುರ&ಆನೇಕಲ್ ಮುಖ್ಯ ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿ ಚಂದಾಪುರ ನಿವಾಸಿಗಳು ಮತ್ತು ಸ್ಥಳಿಯರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ರಸ್ತೆ ಬಂದ್ ಮಾಡಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿ ಕಿ.ಮೀ.ಗಟ್ಟಲೆ ವಾಹನಗಳು ನಿಂತಿದ್ದವು.
ಆಮೆಗತಿಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡಬೇಕು ಎಂದು ಒತ್ತಾಯಿಸಿದ ಹೋರಾಟಗಾರರು, ಧೂಳು ಭಾಗ್ಯ, ಗುಂಡಿ ಭಾಗ್ಯ ಕೊಟ್ಟ ಲೋಕೋಪಯೋಗಿ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು. ಬನಹಳ್ಳಿಯ ಬಿ.ಬಿ.ಐ.ಮುನಿರೆಡ್ಡಿ ಮಾತನಾಡಿ, ಚಂದಾಪುರ&ಆನೇಕಲ್ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಎರಡು ತಿಂಗಳಿನಿಂದ ಆಮೆಗತಿಯ ಕಾಮಗಾರಿ ನಡೆಸುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವುದರಿಂದ ಬೆನ್ನು ನೋವು ಖಚಿತ, ಧೂಳಿನ ಆಲರ್ಜಿ ಉಚಿತವಾಗಿ ದೊರೆಯುತ್ತಿದೆ. ಸಾರ್ವಜನಿಕರು ತೆರಿಗೆ ಪಾವತಿಸುತ್ತಿದ್ದಾರೆ, ಇಂತಹ ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಲು ಯಾವ ಪುರುಷಾರ್ಥಕ್ಕಾಗಿ ತೆರಿಗೆ ಪಾವತಿಸಬೇಕು ಎಂದು ಪ್ರಶ್ನಿಸಿದರು.
ಚಂದಾಪುರ ಮುಖ್ಯ ರಸ್ತೆಯ ಎರಡು ಪಥಗಳನ್ನು ಅಗೆಯಲಾಗಿದೆ. ಎರಡು ತಿಂಗಳಿನಿಂದ ಲೋಕೋಪಯೋಗಿ ಇಲಾಖೆ ಕೆಲಸ ಮಾಡುತ್ತಿದೆ. ಎರಡು ಕಿ.ಮೀ. ರಸ್ತೆ ಮಾಡಲು ಎರಡು ತಿಂಗಳು ಬೇಕಾಗಿದೆಯೇ ಎಂಬುದು ಸಾರ್ವಜನಿರ ಪ್ರಶ್ನೆಯಾಗಿದೆ. ರಸ್ತೆಯಲ್ಲಿ ಜಲ್ಲಿ ಹಾಕಿರುವುದರಿಂದ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವವರ ಶಾಪ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮುಟ್ಟಲಿದೆ. ಆನೇಕಲ್ಗೆ ತೆರಳುವ ಬಹುತೇಕ ಅಧಿಕಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೂ ರಸ್ತೆ ಅಭಿವೃದ್ಧಿ ಪಡಿಸಲು ಹಿಂದೇಟು ಹಾಕುತ್ತಿರುವು ಖಂಡನೀಯ ಎಂದರು.
ಅಂಗಡಿಗಳು ಧೂಳುಮಯ : ಚಂದಾಪುರ ಮುಖ್ಯ ರಸ್ತೆ ಹದಗೆಟ್ಟಿರುವುದರಿಂದ ರಸ್ತೆ ದಟ್ಟಣೆ ಹೆಚ್ಚಾಗಿದೆ. ಎರಡು ಕಿ.ಮೀ. ಸಂಚರಿಸಲು ಗಂಟೆ ಗಟ್ಟಲೇ ಸಮಯ ಹಿಡಿಯುತ್ತಿದೆ. ನಗರೀಕರಣ ಪ್ರಭಾವ ಮತ್ತು ಕೈಗಾರಿಕೆಗಳು ಹೆಚ್ಚಿರುವುದರಿಂದ ಜನ ಸಂಚಾರ ಹೆಚ್ಚಿದೆ, ವಾಹನಗಳು ಹೆಚ್ಚಿವೆ. ಹಾಗಾಗಿ ರಸ್ತೆಯನ್ನು ತ್ವರಿತವಾಗಿ ಅಭಿವೃದ್ಧಿ ಪಡಿಸಬೇಕು. ಮಹಿಳೆಯರು ಈ ರಸ್ತೆಯಲ್ಲಿ ಸಂಚರಿಸಲು ಸಹ ಸಾಧ್ಯವಾಗುತ್ತಿಲ್ಲ. ಈ ರಸ್ತೆಯಲ್ಲಿರುವ ಅಂಗಡಿಗಳು ಧೂಳಿನಿಂದ ಕೂಡಿದೆ. ಹಾಗಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಮುಖಂಡ ಎಸ್.ಆರ್.ಟಿ.ಅಶೋಕ್ ರೆಡ್ಡಿ ಒತ್ತಾಯಿಸಿದರು.
ಹೋರಾಟ ತೀವ್ರಗೊಳಿಸಲು ಎಚ್ಚರಿಕೆ : ರಸ್ತೆಯಲ್ಲಿ ಸಂಚರಿಸಲು ನರಕ ತೋರಿಸುತ್ತಿರುವ ಲೋಕೋಪಯೋಗಿ ಇಲಾಖೆ ಕ್ರಮ ವಹಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಮುಖಂಡ ಮುರಳಿ ಎಚ್ಚರಿಸಿದರು. ರಸ್ತೆ ತಡೆಗೆ ಚಂದಾಪುರ ನಿವಾಸಿಗಳು ಬೆಂಬಲ ಸೂಚಿಸಿದ್ದಾರೆ. ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿದ್ದಾರೆ. ಶಾಲಾ ಕಾಲೇಜುಗಳಿಗೆ ತೆರಳುವವರು ಪರದಾಡುತ್ತಿದ್ದಾರೆ. ಯುಜಿಡಿ, ಇತರೆ ಕೇಬಲ್ ಎಂಬ ಕಾರಣಕ್ಕೆ ಕಾಮಗಾರಿಯನ್ನು ಆಮೆಗತಿಯಲ್ಲಿ ಸಾಗುತ್ತಿದೆ. ಗುತ್ತಿಗೆದಾರರು ರ್ನಿಲ್ಯ ವಹಿಸದೇ ಕಾಮಗಾರಿಗೆ ವೇಗ ನೀಡಬೇಕು. ಕೊರೊನಾ ನಂತರ ಚಂದಾಪುರ ಜನತೆ ಮಾಸ್ಕ್ಗಳನ್ನು ಮರೆತಿದ್ದರು, ರಸ್ತೆ ಸಮಸ್ಯೆಯಿಂದ ಮಾಸ್ಕ್ಗಳು ಮತ್ತೆ ಬಂದಿವೆ ಎಂದರು.