ಯಲ್ಲಾಪುರ: ತಾಲೂಕಿನ ಸರ್ಕಾರಿ ಶಾಲೆಗಳಲ್ಲೂ ಉತ್ತಮ ಇಂಗ್ಲಿಷ್ ಶಿಕ್ಷಣ ನೀಡಲಾಗುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಹೇಳಿದರು.
ತಾಲೂಕಿನ ಸವಣಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು.
ನಗರದ ವ್ಯಾಮೋಹ, ಇಂಗ್ಲಿಷ್ ಶಿಕ್ಷಣದ ಬಗೆಗಿನ ಆಕರ್ಷಣೆಯಿಂದ ಹೆಚ್ಚಿನ ಪಾಲಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಲ್ಲೂ ಶಿಕ್ಷಕರ ಪ್ರಯತ್ನ, ಸಾರ್ವಜನಿಕ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಉತ್ತಮವಾಗಿ ಸಾಗುತ್ತಿದೆ ಎಂದ ಅವರು, ಸರ್ಕಾರಿ ಶಾಲೆಗಳಲ್ಲಿ ಸ್ಥಳೀಯರ ಪಾಲ್ಗೊಳ್ಳುವಿಕೆ ಇದ್ದರೆ ಹೇಗೆ ಪ್ರಗತಿ ಸಾಧಿಸಬಹುದು ಎಂಬುದಕ್ಕೆ ಸವಣಗೇರಿ ಶಾಲೆ ಒಳ್ಳೆಯ ಉದಾಹರಣೆಯಾಗಿದೆ ಎಂದರು.
ಮುಖ್ಯಾಧ್ಯಾಪಕ ಸಂಜೀವಕುಮಾರ ಹೊಸ್ಕೇರಿ ಮಾತನಾಡಿ, ಶಾಲೆಯ ಪ್ರಗತಿಯ ಬಗೆಗೆ ವಿವರಿಸಿದರು. ಇಲಾಖೆಯಿಂದ ಶಾಲೆಗೆ ಕೊಠಡಿ ನಿರ್ವಣಕ್ಕೆ ಅನುದಾನ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಗೌರವಿಸಲಾಯಿತು. ಇದೇ ವೇಳೆ 7ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಕಪಾಟು ದೇಣಿಗೆಯಾಗಿ ನೀಡಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಭಟ್ಟ ಆನಗೋಡ, ಎಸ್ಡಿಎಂಸಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಕೊಂಕಣಕೊಪ್ಪ, ಸ್ಥಳೀಯರಾದ ರವಿ ನಾಯ್ಕ, ವಿಶ್ವನಾಥ ಗಾಂವ್ಕರ, ಇತರರು ಉಪಸ್ಥಿತರಿದ್ದರು.