ಜಿಲ್ಲೆ

ಸ್ಥಳೀಯಾಡಳಿತ ಮಳೆಗಾಲದ ಸಿದ್ಧತೆ : ಹೂಳೆತ್ತುವಿಕೆ, ಅಪಾಯಕಾರಿ ಮರಗಳ ತೆರವಿಗೆ ಆದ್ಯತೆ ಅನಾಹುತ ಎದುರಿಸಲೂ ರೆಡಿ

ಅನ್ಸಾರ್ ಇನೊಳಿ ಉಳ್ಳಾಲ

ಒಂದೆಡೆ ಬಿಸಿಲಿನಿಂದ ತತ್ತರಿಸಿರುವ ಜನತೆ ಮಳೆರಾಯನ ಆಗಮನದ ನಿರೀಕ್ಷೆಯಲ್ಲಿದ್ದರೆ, ಮತ್ತೊಂದೆಡೆ ಮಳೆಗಾಲದಲ್ಲಿ ಎದುರಾಗುವ ಅನಾಹುತಗಳ ಬಗ್ಗೆ ಆತಂಕಕ್ಕೂ ಒಳಗಾಗಿದ್ದಾರೆ. ಈ ನಡುವೆಯೇ ಸ್ಥಳೀಯಾಡಳಿತಗಳು ಮಳೆಗಾಲದ ಅನಾಹುತಗಳನ್ನು ಎದುರಿಸಲು ಸಜ್ಜಾಗುತ್ತಿದ್ದು, ಚರಂಡಿಯ ಹೂಳೆತ್ತುವಿಕೆ, ಅಪಾಯಕಾರಿ ಮರಗಳ ತೆರವಿಗೆ ಆದ್ಯತೆ ನೀಡಿದೆ.

ಉಳ್ಳಾಲ ತಾಲೂಕು, ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿರುವ ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಮತ್ತು ಕೋಟೆಕಾರ್ ಪಟ್ಟಣ ಪಂಚಾಯಿತಿಗಳು ಮಳೆಗಾಲದ ಪೂರ್ವಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ಬೇಸಿಗೆಯ ಸಮಯದಲ್ಲಿ ರಸ್ತೆಬದಿ ಎಸೆಯಲಾಗುವ ಕಸ, ಮುಚ್ಚಲ್ಪಟ್ಟ ಚರಂಡಿಗಳು, ಹೊಂಡಬಿದ್ದ ರಸ್ತೆಗಳು, ಭೂಕುಸಿತ, ನೆರೆ ಹಾವಳಿಯಂತಹ ಸಮಸ್ಯೆಗಳು ಮಳೆಗಾಲದಲ್ಲಿ ಸ್ಥಳೀಯಾಡಳಿತವನ್ನು ಕಾಡುತ್ತವೆ. ಈಗಾಗಲೇ ರಸ್ತೆಬದಿಯ ಚರಂಡಿಗಳಲ್ಲಿ ಹೂಳು ತುಂಬಿ ಬಹುತೇಕ ಮುಚ್ಚಲ್ಪಟ್ಟಿದ್ದು ಮಳೆ ಬಂದಾಗ ನೀರು ರಸ್ತೆಯಲ್ಲೇ ಹರಿದು ಯಾರದ್ದೋ ಮನೆ, ಕಟ್ಟಡಗಳಿಗೆ ನುಗ್ಗುವ ಸಮಸ್ಯೆ ಸಾಮಾನ್ಯ. ಮಳೆನೀರಿನ ಜತೆ ರಸ್ತೆಬದಿ ಬಿದ್ದಿರುವ ತ್ಯಾಜ್ಯ ಕೂಡ ಹರಿದು ಮನೆಯಂಗಳದಲ್ಲಿ ನಿಂತು ಅಸಹ್ಯ ಸೃಷ್ಟಿಸಿದರೆ, ನಾಲೆ, ಚರಂಡಿಯಲ್ಲಿ ನಿಂತು ನೀರು ಹರಿಯಲೂ ತೊಂದರೆ ನೀಡುತ್ತದೆ. ಹೊಂಡ ಬಿದ್ದ ಒಳರಸ್ತೆಗಳಲ್ಲಿ ನೀರು ನಿಂತು ಅಪಘಾತಗಳೂ ಸಾಮಾನ್ಯ ಎನಿಸುತ್ತವೆ.

ಅದರಲ್ಲೂ ಉಳ್ಳಾಲ ಮತ್ತು ಸೋಮೇಶ್ವರದಲ್ಲಿ ಕಡಲಬ್ಬರ, ಸಮುದ್ರ ಕಿನಾರೆಯ ರಸ್ತೆಗೆ ಹಾನಿಯಾಗುವುದು ಸರ್ವೇ ಸಾಮಾನ್ಯ. ಈ ನಿಟ್ಟಿನಲ್ಲಿ ಎರಡೂ ನಗರಾಡಳಿತದ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಸಮಸ್ಯೆ ಎದುರಾದಾಗ ಬಗೆಹರಿಸಲು ಯಾವುದೇ ಸಮಯದಲ್ಲೂ ಸಜ್ಜಾಗಿಯೇ ಇರಬೇಕಾಗುತ್ತದೆ.

ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಮತ್ತು ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿ ಹೂಳೆತ್ತುವ ಕೆಲಸ ಕೆಲವು ಕಡೆಗಳಿಗೆ ಆದ್ಯತೆ ಮೇರೆಗೆ ನಡೆಯುತ್ತಿದೆ. ಅಪಾಯಕಾರಿ ಮರಗಳ ತೆರವಿಗೂ ಆದ್ಯತೆ ನೀಡಲಾಗಿದ್ದು ಈ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಕೋಟೆಕಾರ್ ಪಟ್ಟಣ ಪಂಚಾಯಿತಿಯಿಂದ ಕರೆಯಲಾಗಿದ್ದ ಟೆಂಡರ್‌ಗೆ ಗುತ್ತಿಗೆದಾರರಿಂದ ಯಾವುದೇ ಪ್ರಕ್ರಿಯೆ ಬಾರದ ಎರಡನೇ ಬಾರಿ ಟೆಂಡರ್ ಕರೆಯಲಾಗಿದ್ದು ಒಂದೆರಡು ವಾರ್ಡ್‌ಗಳಲ್ಲಿ ಮಾತ್ರ ಮಳೆಗಾಲದ ಪೂರ್ವಸಿದ್ಧತೆ ಆರಂಭಗೊಂಡಿದೆ.

ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲೂ ಸದ್ಯ ಕೆಲಸ ನಡೆಯುತ್ತಿದ್ದು ಚುರುಕು ಪಡೆದಿಲ್ಲ. ಏನಿದ್ದರೂ ಈ ತಿಂಗಳಾಂತ್ಯ ಚುರುಕು ಪಡೆಯುವ ನಿರೀಕ್ಷೆ ಹೊಂದಲಾಗಿದೆ. ಹೂಳೆತ್ತುವ ಹಾಗೂ ಅಪಾಯಕಾರಿ ಮರಗಳ ರೆಂಬೆಗಳನ್ನು ಕಡಿಯುವ ಕೆಲಸದ ಹೊರತು ರಸ್ತೆಗಳಲ್ಲಿ ಹೊಂಡ ಮುಚ್ಚುವ ಕೆಲಸ ಇನ್ನೂ ಆರಂಭಗೊಂಡಿಲ್ಲ. ಈಗಾಗಲೇ ಸ್ಪೀಕರ್ ಯು.ಟಿ.ಖಾದರ್ ಸಭೆ ನಡೆಸಿ ಅಧಿಕಾರಿಗಳಿಗೆ ಮಾರ್ಗಸೂಚಿಯನ್ನೂ ನೀಡಿದ್ದಾರೆ.

ರಾತ್ರಿ-ಹಗಲು ನಿಯಂತ್ರಣ ಕೊಠಡಿ

ಮೂರೂ ಸ್ಥಳೀಯಾಡಳಿತಗಳಲ್ಲೂ ನಾಗರಿಕರಿಗೆ ಹಿತದೃಷ್ಟಿಯಿಂದ ಪುರಸಭಾ ಕಚೇರಿಯಲ್ಲಿ ಹಿಂದಿನಂತೆ ಈ ಬಾರಿಯೂ ನಿಯಂತ್ರಣ ಕೊಠಡಿ(ಕಂಟ್ರೋಲ್ ರೂಂ) ಇರಲಿವೆ. ನೆರೆಹಾವಳಿ, ಭೂಕುಸಿತ ಹಾಗೂ ಇತರ ಆಕಸ್ಮಿಕ ಘಟನೆಗಳು ನಡೆದಾಗ ಅಥವಾ ತುರ್ತು ಸಂದರ್ಭದಲ್ಲಿ ಕಂಟ್ರೋಲ್ ರೂಂಗೆ ಕರೆ ಮಾಡಬಹುದಾಗಿದೆ. ನಿಯಂತ್ರಣ ಕೊಠಡಿಗಳು ದಿನದ 24 ಗಂಟೆಯೂ ಕಾರ್ಯಾಚರಿಸಲಿವೆ. ಸರ್ಕಾರಿ ರಜಾದಿನಗಳಲ್ಲೂ ಇಬ್ಬರು ಸಿಬ್ಬಂದಿ ಕಚೇರಿಯಲ್ಲಿದ್ದರೆ, ಇತರ ದಿನಗಳಲ್ಲಿ ಹಗಲು ಪಾಳಿಯಲ್ಲಿ ಮಹಿಳಾ ಸಿಬ್ಬಂದಿ ಹಾಗೂ ರಾತ್ರಿ ಪಾಳಿಯಲ್ಲಿ ಪುರುಷ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.

ಆಸರೆ ನೀಡಲು ಕಾಳಜಿ ಕೇಂದ್ರ

ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕಡಲ್ಕೊರೆತ, ಪ್ರವಾಹಪೀಡಿತ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳಿಗೆ ಆಸರೆ ನೀಡಲು ಕಾಳಜಿ ಕೇಂದ್ರ ತೆರೆಯಲಾಗುತ್ತದೆ. ಕರ್ತವ್ಯ ನಿರ್ವಹಿಸಲು ಪ್ರತಿ ವಾರ್ಡ್‌ನಲ್ಲೂ ಒಬ್ಬ ಇನ್ಸಿಡೆಂಟ್ ಕಮಾಂಡರ್ ಕಾರ್ಯನಿರ್ವಹಿಸಲಿದ್ದಾರೆ. ನೆರೆ ಹಾವಳಿ, ಭೂಕುಸಿತ, ಅಗ್ನಿ ಅವಘಡದಂತಹ ವಿಪತ್ತು ಸಂಭವಿಸುವ ಪ್ರದೇಶಗಳನ್ನು ಗುರುತಿಸಿ ಸ್ಥಳೀಯವಾಗಿ ಲಭ್ಯವಿರುವ ರಕ್ಷಣಾ ಸಾಮಗ್ರಿಗಳಾದ ಬೋಟ್, ರೋಪ್, ಟ್ರೀ ಕಟ್ಟಿಂಗ್ ಮಷಿನ್, ಜೆ.ಸಿ.ಬಿ, ಅಗತ್ಯವಿದ್ದರೆ ಕ್ರೇನ್, ಮಾನವ ಸಂಪನ್ಮೂಲವಾಗಿ ಈಜುಗಾರರು, ಚಾಲಕರು, ಸ್ನೇಕ್ ಕ್ಯಾಚರ್ಸ್‌ಗಳನ್ನು ಗುರುತಿಸಲಾಗಿದ್ದು ಶೀಘ್ರ ಸಭೆ ನಡೆಯಲಿದೆ.

ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಹೂಳೆತ್ತುವ ಹಾಗೂ ಅಪಾಯಕಾರಿ ಮರ ತೆರವುಗೊಳಿಸುವ ಕೆಲಸ ನಡೆಯುತ್ತಿದೆ. ಕಡಲ್ಕೊರೆತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಈಜುಗಾರರ ಸಭೆ ಶೀಘ್ರ ನಡೆಸುತ್ತೇವೆ. ಸಹಾಯವಾಣಿ ಮತ್ತು ನಿಯಂತ್ರಣಾ ಕೊಠಡಿಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು ಶೀಘ್ರ ರೂಪುರೇಷೆ ಸಿಗಲಿದೆ. ಮತ್ತಡಿ ಪೌರಾಯುಕ್ತ, ಉಳ್ಳಾಲ ನಗರಸಭೆ ಹೂಳೆತ್ತಲು ಹಾಗೂ ಅಪಾಯಕಾರಿ ಮರಗಳ ತೆರವಿಗೆ ಕರೆಯಲಾಗಿದ್ದ ಟೆಂಡರ್‌ಗೆ ಯಾರಿಂದಲೂ ಪೂರಕ ಸ್ಪಂದನೆ ಸಿಗದ ಕಾರಣ ಎರಡನೇ ಬಾರಿ ಟೆಂಡರ್ ಕರೆಯಲಾಗಿದೆ. ಅದರಂತೆ ಗುತ್ತಿಗೆದಾರರು ಕೆಲಸ ವಹಿಸಿಕೊಂಡಿದ್ದು ಕೆಲವು ವಾರ್ಡ್‌ಗಳಲ್ಲಿ ಹೂಳೆತ್ತುವ ಕೆಲಸ ನಡೆಯುತ್ತಿದೆ. ನಿಯಂತ್ರಣಾ ಕೊಠಡಿ ಕಳೆದ ಬಾರಿಯಂತೆ ಈ ಬಾರಿಯೂ ಕಚೇರಿಯಲ್ಲೇ ಕಾರ್ಯನಿರ್ವಹಿಸಲಿದೆ. ಮಾಲಿನಿ ಮುಖ್ಯಾಧಿಕಾರಿ, ಕೋಟೆಕಾರ್ ಪ.ಪಂ. https://www.vijayavani.net/brahma-kalash https://www.vijayavani.net/house-handover