ಜಿಲ್ಲೆ

ಸಿಡಿಮದ್ದು ಸ್ಫೋಟಿಸಿ ಹಸುವಿನ ಬಾಯಿ ಛಿದ್ರ

ಎ. ಆರ್. ರಘುರಾಮ

 ಹನೂರು : ಸಮೀಪದ ಬೂದುಬಾಳು ಗ್ರಾಮದ ಹೊರವಲಯದ ಮಾಳದಲ್ಲಿ ಮಂಗಳವಾರ ಕಿಡಿಗೇಡಿಗಳು ಅಡಗಿಸಿಟ್ಟಿದ್ದ ಸಿಡಿಮದ್ದು ಸ್ಫೋಟಿಸಿ ಹಸುವಿನ ಬಾಯಿ ಛಿದ್ರವಾಗಿದೆ. ಗ್ರಾಮದ ಮಲ್ಲಯ್ಯ ಎಂಬುವರು ಅರಬಗೆರೆಗೆ ತೆರಳುವ ಆಂಜನೇಯ ಸ್ವಾಮಿ ದೇಗುಲದ ಬಳಿಯ ಮಾಳದಲ್ಲಿ ಹಸುವನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಹಸು ಮೇಯಲು ಬಾಯಿ ಹಾಕಿದಾಗ ಕಿಡಿಗೇಡಿಗಳು ಕಾಡು ಪ್ರಾಣಿಗಳನ್ನು ಬೇಟೆಯಾಡುವ ಉದ್ದೇಶದಿಂದ ಅಡಗಿಸಿಟ್ಟಿದ್ದ ಸಿಡಿಮದ್ದು ಸಿಡಿದಿದೆ. ಪರಿಣಾಮ ಹಸುವಿನ ಬಾಯಿ ಛಿದ್ರವಾಗಿದೆ. ಅದು ಸಾವು, ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದೆ. ಕಿಡಿಗೇಡಿಗಳ ಕೃತ್ಯಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 2-3 ತಿಂಗಳಿನಿಂದ ತಾಲೂಕಿನ ವಿವಿಧ ಕಡೆ ಕಿಡಿಗೇಡಿಗಳಿಂದ ಇಂತಹ ಕೃತ್ಯಗಳು ನಡೆಯುತ್ತಲೇ ಇದ್ದವು. ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ನಿಗಾ ವಹಿಸಿ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದರು. ಈ ಹಿನ್ನ್ನೆಲೆಯಲ್ಲಿ ಮುತುರ್ವಜಿ ವಹಿಸಿದ್ದ ಎಸ್ಪಿ ಡಾ. ಬಿ.ಟಿ ಕವಿತಾ ಅವರ ಸೂಚನೆಯಿಂತೆ 15 ದಿನದ ಹಿಂದೆ ಇಂಥ ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಆದರೆ ಇದೀಗ ಮತ್ತೆ ಕೃತ್ಯ ಆರಂಭವಾಗಿರುವುದು ಕೃಷಿಕರ ಆತಂಕಕ್ಕೆ ಕಾರಣವಾಗಿದೆ.