ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರಸಭೆ ವ್ಯಾಪ್ತಿಯಲ್ಲಿ ಹಂದಿಗಳ ಸಾಕಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರ ನಡುವೆಯೂ ನಾನಾ ಬಡಾವಣೆಗಳಲ್ಲಿ ಹಂದಿಗಳ ಹಾವಳಿ ನಿಂತಿಲ್ಲ. ಇದಕ್ಕೆ ಸ್ಥಳೀಯ ಆಡಳಿತ ಸಂಸ್ಥೆ ಕಾರ್ಯಾಚರಣೆ ಕೈಗೊಂಡು ವಶಪಡಿಸಿಕೊಂಡಿದೆ.
ಬೆಳಿಗ್ಗೆ ದಿಢೀರ್ ಕಾರ್ಯಾಚರಣೆ ನಡೆಸಿ
8 ದೊಡ್ಡ ಹಂದಿ, 7 ಹಂದಿ ಮರಿಗಳನ್ನ ವಶಕ್ಕೆ ಪಡೆದು ಬೇರೆ ಕಡೆಗೆ ಸಾಗಿಸಲಾಗಿದೆ. ನಗರದಾದ್ಯಂತ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿರುವ ಹಿನ್ನೆಲೆಯಲ್ಲಿ ಹಂದಿಗಳನ್ನು ನಗರದೊಳಗೆ ಬಿಡದೇ ನಗರದಿಂದ ದೂರ ಸಾಗಿಸುವಂತೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ ಸಹ ಮಾಲೀಕರು ಎಚ್ಚೆತ್ತುಕೊಂಡಿಲ್ಲ. ಹಲವಾರು ತಿಂಗಳುಗಳಿಂದ ಆಗಾಗ್ಗೆ ಕಾರ್ಯಾಚರಣೆ ಕೈಗೊಳ್ಳುತ್ತಿದ್ದರೂ ಸಹ ಹಂದಿಗಳ ಸಾಕಾಣಿಕೆಯನ್ನು ನಿಲ್ಲಿಸಿರಲಿಲ್ಲ. ಇದರ ಪರಿಣಾಮ ನಗರಸಭೆ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಪರಿಸರ ಅಭಿಯಂತರ ಶಿವಶಂಕರ್, ಆರೋಗ್ಯ ನಿರೀಕ್ಷಕರ ನವೀನ್, ಆರೋಗ್ಯ ಶಾಖೆಯ ಸಣ್ಣಮೀರ್, ಸುಹೇಲ್ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.