ಜಿಲ್ಲೆ

ಪಹಣಿ ಇಲ್ಲದ ಬಡ ಜನತೆಗೂ ಸಾಲ! : ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು

Tumakuru

ಮಧುಗಿರಿ: ಜಮೀನು ಹಾಗೂ ಪಹಣಿ ಇಲ್ಲದ ಬಡ ಜನತೆಗೂ ಡಿಸಿಸಿ ಬ್ಯಾಂಕ್ ಸಾಲ ನೀಡಿ ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ಇರಾದೆಯನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೊಂದಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಹೇಳಿದರು.

ತಾಲೂಕಿನ ಮರುವೇಕೆರೆ ವಿಎಸ್‌ಎಸ್‌ಎನ್ ಆವರಣದಲ್ಲಿ ಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶ್ ಬಾಬು ಮತ್ತು ನಾಲ್ಕನೇ ಬಾರಿಗೆ ಆಯ್ಕೆಯಾದ ಜಿ.ಜೆ.ರಾಜಣ್ಣ ಅವರಿಗೆ ಶುಕ್ರವಾರ ವಿಎಸ್‌ಎಸ್‌ಎನ್ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಮೂಲಕ ಮಧುಗಿರಿ ತಾಲೂಕಿನಲ್ಲಿರುವ ವಿಎಸ್‌ಎಸ್‌ಎನ್ ಮೂಲಕ ನೀಡಿದ್ದ 164 ಕೋಟಿ ರೂ. ಸಾಲ ಮನ್ನವಾಗಿದ್ದು, ಪ್ರಸ್ತುತ 140 ಕೋಟಿ ರೂ.ಪಾಯಿ ವರೆಗೂ ಕೆಸಿಸಿ ಸಾಲ ನೀಡಲಾಗಿದೆ ಎಂದರು.

ಜಿಪಂ ಸದಸ್ಯ ಜಿ.ಜೆ ರಾಜಣ್ಣ ಮಾತನಾಡಿ, ಸಾಲ ವಿತರಣೆಯಲ್ಲಿ ಯಾವುದೇ ಹಸ್ತಕ್ಷೇಪ ನಡೆಸಿಲ್ಲ. ಕೋಟ್ಯಂತರ ರೂಪಾಯಿ ಸಾಲ ನೀಡಿ ಮನ್ನವಾಗಿದೆ. ಆದರೆ, ಅದನ್ನು ಮತಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಕಾರ್ಯದರ್ಶಿಗಳು ಪ್ರಯತ್ನಿಸುವುದರ ಜತೆಗೆ ಸಾಲ ವಿತರಣೆ ವೇಳೆ ಪ್ರಾಮಾಣಿಕರಾಗಿರಬೇಕು ಎಂದು ಹೇಳಿದರು.

ಪಾವಗಡ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸೀತಾರಾಂ ಮಾತನಾಡಿ, ಡಿಸಿಸಿ ಬ್ಯಾಂಕ್‌ನಿಂದ ಸಾಲ ವಿತರಿಸುವಾಗ ನಿರ್ದೇಶಕರು ಕಾವಲು ಕಾಯಬೇಕು. ತಾಲೂಕಿನಲ್ಲಿ 26 ವಿಎಸ್‌ಎಸ್‌ಎನ್ , 160 ಎಂಪಿಸಿಎಸ್ ಮೂಲಕ ಕೋಟ್ಯಂತರ ರೂಪಾಯಿ ಸಾಲ ರೈತರಿಗೆ ನೀಡಲಾಗುತ್ತಿದೆ. ಇದರ ಬಗ್ಗೆ ಡಿಸಿಸಿ ಬ್ಯಾಂಕ್ ಪ್ರಚಾರ ನೀಡಬೇಕೆಂದರು. ವಿಎಸ್‌ಎಸ್‌ಎನ್ ಸದಸ್ಯರಾದ ರಂಗನಾಥ್, ಎಚ್.ಎಸ್.ನಾಗರಾಜು, ಡಿ.ಎಚ್.ನಾಗರಾಜು, ಬಂದ್ರೇಹಳ್ಳಿ ಮಂಜುನಾಥ್, ಕಾರ್ಯದರ್ಶಿ ಸುರೇಶ್ ಬಾಬು , ಮುಖಂಡರಾದ ಕೆ.ರಮೇಶ್, ಅಂಗಡಿ ರಂಗಣ್ಣ, ಇದ್ದರು.