ಜಿಲ್ಲೆ

ಸಾಲ 30 ಜನ ಮಹಿಳೆಯರ ಹೆಸರಿನಲ್ಲಿ; 30 ಲಕ್ಷ ಹಣ ಗ್ರಾಪಂ ಉಪಾಧ್ಯಕ್ಷೆ ಖಾತೆಗೆ

ಹಾನಗಲ್ಲ: 30 ಜನ ಮಹಿಳೆಯರ ಹೆಸರಿಗೆ ಸಾಲ ಕೊಡಿಸಿದ ಗ್ರಾಪಂ ಉಪಾಧ್ಯಕ್ಷೆ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ನಾಪತ್ತೆಯಾಗಿರುವ ಘಟನೆ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ದಾಖಲಾಗಿದೆ.
ತಾಲೂಕಿನ ಚಿಕ್ಕಾಂಶಿಹೊಸೂರ ಗ್ರಾಪಂ ಉಪಾಧ್ಯಕ್ಷೆ ಹಾಗೂ ಕ್ಯಾಸನೂರ ಗ್ರಾಮದ ನಿವಾಸಿಗಳಾದ ಮಂಜುಳಾ ರಾಜಪ್ಪ ಹುಳ್ಳಿ (35) ಹಾಗೂ ಈಕೆಯ ಪತಿ ರಾಜಪ್ಪ ಬಸಪ್ಪ ಹುಳ್ಳಿ (45) ಮೋಸ ಮಾಡಿದವರು.
ಈ ಕುರಿತು ಮೋಸ ಹೋದ ಸುಶೀಲಮ್ಮ ಗೋರವಿಕಟ್ಟೆ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ಮಂಜುಳಾ ನಾನು ಗ್ರಾಪಂ ಉಪಾಧ್ಯಕ್ಷೆ ಇದ್ದೇನೆ. ನಿಮಗೆ ಏನೇ ಕೆಲಸ ಇದ್ದರೂ ಹೇಳಿ ನಾನು ಮಾಡಿಕೊಡುವೆ ಎಂದು ಜನರಿಗೆ ನಂಬಿಸಿದ್ದಾಳೆ. 2021 ಜನೇವರಿ ತಿಂಗಳಿಂದ ಈವರೆಗೂ ಗ್ರಾಪಂ ವ್ಯಾಪ್ತಿಯ 30 ಜನ ಮಹಿಳೆಯರಿಗೆ ತಮಗೆ ಪರಿಚಯವಿದ್ದ ವಿವಿಧ ಸಂಘ ಸಂಸ್ಥೆಗಳಲ್ಲಿ 30 ಲಕ್ಷ ರೂ. ಸಾಲ ಕೊಡಿಸಿದ್ದಾಳೆ.
ಸಾಲವನ್ನು ನಾನೇ ಕಂತಿನ ಮೂಲಕ ಕಟ್ಟುತ್ತೇನೆ ಎಂದು ಹೇಳಿ 30 ಜನ ಮಹಿಳೆಯರಲ್ಲಿ ಕೆಲವರಿಂದ ಖಾತೆ ಮೂಲಕ ಹಾಗೂ ಇನ್ನೂ ಕೆಲವರಿಂದ ಕೈಗಡವಾಗಿ 30 ಲಕ್ಷ ರೂ. ಪಡೆದುಕೊಂಡಿದ್ದಾಳೆ. ಆದರೆ, ವಾಪಸ್ ಹಣವನ್ನು ಸಂಘಗಳಿಗೆ ಕಟ್ಟದೆ ಹಾಗೂ ಮಹಿಳೆಯರಿಗೆ ಹಣವನ್ನೂ ಕೊಡದೆ ಮೋಸ ಮಾಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಸದ್ಯ ಮಂಜುಳಾ ನಾಪತ್ತೆಯಾಗಿದ್ದಾಳೆ ಎನ್ನಲಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.