ಜಿಲ್ಲೆ

ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೊಷಿಸಿ

Chikkamagaluru

ಚಿಕ್ಕಮಗಳೂರು: ಹವಾಮಾನ ವೈಪರೀತ್ಯದಿಂದ ಕಾಫಿ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದ್ದು, ಸಂಕಷ್ಟದಲ್ಲಿರುವ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕೆಂದು ಕರ್ನಾಟಕ ಬೆಳೆಗಾರರ ಒಕ್ಕೂಟ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

2015ರಿಂದ ಈಚೆಗೆ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕಾಫಿ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ಜತೆಗೆ ರೋಗ ಬಾಧೆ, ಬೆಲೆ ಕುಸಿತ, ಕಾರ್ವಿುಕರ ಕೊರತೆ, ಕಾಡುಪ್ರಾಣಿಗಳ ಹಾವಳಿ ಬೆಳೆಗಾರರನ್ನು ಹೈರಾಣಾಗಿಸಿದೆ. ಬೆಳೆಗಾರರ ಮನವಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ಪ್ರತಿಭಟಿಸುವುದು ಅನಿವಾರ್ಯ ಎಂದು ಕೆಜಿಎಫ್ ಉಪಾಧ್ಯಕ್ಷ ವಸಂತೇಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಈ ವರ್ಷದಲ್ಲಿ ಎರಡನೇ ಬಾರಿಗೆ ಅಕಾಲಿಕ ಮಳೆ ಸುರಿಯುತ್ತಿದೆ. ರೋಬಸ್ಟಾ ಕಾಫಿ ಕೊಯ್ಲು ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಸಂದರ್ಭದಲ್ಲೇ ಮಳೆ ಸುರಿದಿರುವುದರಿಂದ ಕಾಫಿ ಹಣ್ಣು ಸಂಪೂರ್ಣ ಉದುರಿ ನಷ್ಟ ಸಂಭವಿಸಿದೆ. ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಸಹ ಕೊಚ್ಚಿಹೋಗಿದೆ ಎಂದರು.

ಮಳೆಯಿಂದಾಗಿ ಗಿಡಗಳಲ್ಲಿ ಅಕಾಲಿಕವಾಗಿ ಕಾಫಿ ಮೊಗ್ಗಾಗಿದ್ದು, ಈಗ ಅದು ಹೂವಾಗಿ ಅರಳಬೇಕಾದರೆ ಮತ್ತೆ ಅದಕ್ಕೆ ನೀರು ನೀಡಬೇಕಾಗಿರುವ ಸಂದಿಗ್ಧ ಪರಿಸ್ಥಿತಿ ನಿರ್ವಣವಾಗಿದೆ. ಒಟ್ಟಾರೆ ಈಗ ಗಿಡದಲ್ಲಿರುವ ಫಸಲು ಉಳಿಸಿಕೊಳ್ಳುವುದು, ಜತೆಗೆ ಮೊಗ್ಗು ಮತ್ತು ಹೂವನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಈ ಎಲ್ಲ ಸಮಸ್ಯೆಗಳ ಬಗ್ಗೆ ಕಾಫಿ ಮಂಡಳಿ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಒಕ್ಕೂಟ ಆಗ್ರಹಿಸುವುದಾಗಿ ಹೇಳಿದರು.