ಜಿಲ್ಲೆ

ರೈತರಿಗೆ 20,810 ಕೋಟಿ ರೂ. ಸಾಲ ವಿತರಣೆ ಗುರಿ: ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

Dakshina Kannada

ಮಂಗಳೂರು: ರಾಜ್ಯದ 30.86 ಲಕ್ಷ ರೈತರಿಗೆ ಸಹಕಾರ ಸಂಘಗಳ ಮೂಲಕ ಮಾ.25ರೊಳಗೆ 20,810 ಕೋಟಿ ರೂ. ಸಾಲ ವಿತರಣೆ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಾರ ಎಲ್ಲ 21 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದ್ದು, ಈಗಾಗಲೇ 20 ಲಕ್ಷ ರೈತರಿಗೆ 14 ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಸಾಲ ವಿತರಣೆಗೆ ನಿಗದಿ ಪಡಿಸಲಾದ ಗುರಿ ತಲುಪುವ ನಿರೀಕ್ಷೆ ಇದೆ

ಸಹಕಾರಿ ಕಾಯ್ದೆಯಲ್ಲಿ ಕೆಲವೊಂದು ತಿದ್ದುಪಡಿ ತರುವಂತೆ ರಾಜ್ಯದ ಹಿರಿಯ ಸಹಕಾರಿಗಳು ಈಗಾಗಲೇ ಮನವಿ ಸಲ್ಲಿಸಿದ್ದಾರೆ. ಈ ಕುರಿತಂತೆ ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಅವರೊಂದಿಗೆ ಚರ್ಚೆ ನಡೆಸಲು ನಿರ್ಧರಿಸಲಾಗಿತ್ತು. ಸಂಘದ ನಿರ್ದೇಶಕರೊಬ್ಬರು ಆಯ್ಕೆಯಾದ ಎರಡೂವರೆ ವರ್ಷದ ಒಳಗೆ ಅಕಸ್ಮಾತ್ ನಿಧನರಾದರೆ ಮತ್ತೆ ಚುನಾವಣೆ ಮಾಡಬೇಕು ಎನ್ನುವ ನಿಯಮವಿದೆ. ಒಂದು ಸ್ಥಾನಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚುನಾವಣೆ ನಡೆಸಬೇಕಾಗಿದೆ. ಎರಡೂವರೆ ವರ್ಷ ಮೇಲ್ಪಟ್ಟಿದ್ದರೆ ಆಡಳಿತ ಮಂಡಳಿಯೇ ನಿರ್ದೇಶಕರ ಆಯ್ಕೆ ಮಾಡಬಹುದಾಗಿದೆ.

ಇದಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತೆರಬೇಕಿದೆ. ಇನ್ನೊಂದು ಸಹಕಾರಿ ಸಂಸ್ಥೆಯಲ್ಲಿ ಎಷ್ಟೇ ಬಾಕಿ ಉಳಿಸಿಕೊಂಡಿದ್ದರೂ, ಆತ ಎಂಎಲ್‌ಎ ಚುನಾವಣೆಗೆ ಸ್ಪರ್ಧಿಸಬಹುದು. ಸಹಕಾರಿ ಸಂಘದ ಬಾಕಿ ತೀರಿಸಿದ ಬಳಿಕವಷ್ಟೇ ಚುನಾವಣೆಗೆ ನಿಲ್ಲಬಹುದು ಎಂದು ಕಾಯ್ದೆಯಲ್ಲಿ ತಿದ್ದುಪಡಿ ತಂದರೆ, ಸಂಘಕ್ಕೆ ಹೆಚ್ಚು ಅನುಕೂಲವಾಗಲಿದೆ ಈ ಮೊದಲಾದ ಸಮಸ್ಯೆಗಳ ಕರಿತು ಸಹಕಾರಿಗಳು ನೀಡಿರುವ 7-8 ಮನವಿಗಳನ್ನು ಸಚಿವರಿಗೆ ಸಲ್ಲಿಸಿದ್ದೇವೆ. ಅವರು ರಾಜ್ಯಕ್ಕೇ ಬಂದು ಎಲ್ಲ ಸಹಕಾರಿಗಳ ಚರ್ಚೆ ಮಾಡೋಣ ಎಂದು ಹೇಳಿದ್ದರು. ಜ.8-9ಕ್ಕೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಕೋವಿಡ್ ಮೂರನೇ ಅಲೆಯಿಂದ ದಿನಾಂಕ ಮುಂದೂಡಲಾಗಿದ್ದು, ಮಾರ್ಚ್ ಬಳಿಕ ಮತ್ತೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಸಚಿವರು ತಿಳಿಸಿದರು.