ಜಿಲ್ಲೆ

ಕುಳಿತಲ್ಲೇ ಹಣ ಪಾವತಿ ವ್ಯವಸ್ಥೆ ; ಡಿಸಿಸಿ ಬ್ಯಾಂಕ್‌ನಿಂದ ಮೈಕ್ರೋ ಎಟಿಎಂ ಮೂಲಕ ಸಾಲ ವಿತರಣಾ ಕಾರ್ಯಕ್ರಮ

Kolar

ಕೋಲಾರ: ಸಹಕಾರಿ ಕ್ಷೇತ್ರದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮೈಕ್ರೋ ಎಟಿಎಂ ಪರಿಚಯಿಸುವ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಸೋಮವಾರ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಮೈಕ್ರೋ ಎಟಿಎಂ ಮೂಲಕ ಸಾಲ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಒಬ್ಬ ಸಹಕಾರಿಯಾಗಿ ರಾಜಕೀಯಕ್ಕಿಂತ ಸಹಕಾರಿ ವ್ಯವಸ್ಥೆ ಮೇಲೆ ನನಗೆ ಹೆಚ್ಚು ನಂಬಿಕೆ. ಹೆಣ್ಣು ಮಕ್ಕಳು ಕುಳಿತುಕೊಂಡಿದ್ದ ಜಾಗದಲ್ಲೇ ಹಣ ಡ್ರಾ ಮಾಡುವ, ಪಾವತಿಸುವ ವ್ಯವಸ್ಥೆ ಕಲ್ಪಿಸಿರುವ ಡಿಸಿಸಿ ಬ್ಯಾಂಕ್ ಇಡೀ ದೇಶಕ್ಕೆ ಮಾದರಿಯಾಗುವ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಯಾವುದೇ ಬ್ಯಾಂಕ್‌ಗಳು ಸಣ್ಣ ಸಾಲಗಾರರಿಗೆ ಎಟಿಎಂ ಕಾರ್ಡ್ ವಿತರಿಸುವುದಿಲ್ಲ. ಇಂತಹ ಪ್ರಯೋಗಕ್ಕೆ ನಬಾರ್ಡ್ ನೀಡಿದ ಸಲಹೆ ಸ್ವೀಕರಿಸಿ ಆರು ತಿಂಗಳಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಶ್ರಮದಿಂದ ಮೈಕ್ರೋ ಎಟಿಎಂ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ. ಮೈಕ್ರೋ ಎಟಿಎಂಗೆ ಯಂತ್ರಕ್ಕೆ ತಗಲುವ ವೆಚ್ಚ, ಎರಡು ಮೊಬೈಲ್ ವಾಹನವನ್ನು ನಬಾರ್ಡ್ ಒದಗಿಸಿದೆ. ಬ್ಯಾಂಕಿನ ಇಷ್ಟು ವರ್ಷಗಳ ಸಾಧನೆಗಿಂತ ಈ ಕೆಲಸ ಹೆಚ್ಚು ತೃಪ್ತಿ ತಂದಿದೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್‌ನ 6.27 ಲಕ್ಷ ಖಾತೆದಾರರಿಗೆ ಒಂದು ವರ್ಷದಲ್ಲಿ ಮೈಕ್ರೋ ಎಟಿಎಂ ಸೇವೆ ಒದಗಿಸುವ ಗುರಿ ಹೊಂದಲಾಗಿದ್ದು, 2 ಲಕ್ಷ ಎಟಿಎಂ ಕಾರ್ಡ್‌ಗೆ ಬೇಡಿಕೆ ಸಲ್ಲಿಸಲಾಗಿದ್ದು, 50,000 ಕಾರ್ಡ್‌ಗಳು ಬಂದಿವೆ. ಹಂತ-ಹಂತವಾಗಿ ಕಾರ್ಡ್ ಸರಬರಾಜಾಗಲಿವೆ ಎಂದರು.

ನಿರ್ದೇಶಕ ಕೆ.ವಿ.ದಯಾನಂದ್ ಮಾತನಾಡಿ, ಆರು ತಿಂಗಳಿಂದ ಸತತ ಪ್ರಯತ್ನದಿಂದ ಮೈಕ್ರೋ ಎಟಿಎಂ ಸೇವೆ ಕಲ್ಪಿಸಲು ಸಾಧ್ಯವಾಗಿದೆ. ಹಣ ಪಾವತಿ, ಡ್ರಾ ಮಾಡಲು ಚಲನ್ ಬರೆಯುವ ಅವಶ್ಯಕತೆ ಇಲ್ಲ. ವಾರದ ಉಳಿತಾಯದ ಹಣವನ್ನು ಮನೆಬಾಗಿಲಿಗೆ ಬಂದು ಕಟ್ಟಿಸಿಕೊಳ್ಳಾಗುವುದು ಎಂದರು.

ನಿರ್ದೇಶಕ ಸೊಣ್ಣೇಗೌಡ ಮಾತನಾಡಿ, ಮೈಕ್ರೋ ಎಟಿಎಂ ಸೌಲಭ್ಯ ಬ್ಯಾಂಕ್ ಇತಿಹಾಸದಲ್ಲೇ ಮೈಲಿಗಲ್ಲು, ಪಾರದರ್ಶಕತೆ ಕಾಪಾಡಿಕೊಳ್ಳಲು ನೆರವಾಗಲಿದೆ, ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಎಂದರು.  ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಕೋಲಾರ ತಾಲೂಕನ್ನು ಪೈಲಟ್ ಪ್ರಾಜೆಕ್ಟ್ ಆಗಿ ತೆಗೆದುಕೊಂಡು ಒಟ್ಟು 1 ಲಕ್ಷ ಹೆಣ್ಣುಮಕ್ಕಳಿಗೆ ಸಾಲ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್ ಕಾರ್ಯಪ್ರವೃತ್ತರಾಗಿದ್ದು, ಹಂತ ಹಂತವಾಗಿ ಸಾಲ ನೀಡಲಾಗುವುದು ಎಂದರು.

ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಮೂರಾಂಡಹಳ್ಳಿ ಗೋಪಾಲ್, ಉರಿಗಿಲಿ ರುದ್ರಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಮುಖಂಡ ರಾಮಣ್ಣ, ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಇತರರು ಹಾಜರಿದ್ದರು.

ಹೆಣ್ಣು ಮಕ್ಕಳು ಮನೆ ಬಾಗಿಲಲ್ಲೇ ಮೈಕ್ರೋ ಎಟಿಎಂ ಮೂಲಕ ಹಣ ಪಡೆಯುವ ವಿಶಿಷ್ಟ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಮಧ್ಯವರ್ತಿಗಳಿಗೆ ಅವಕಾಶ ಇಲ್ಲ, ಸಾಲ ನೀಡುವಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಮಾತು, ಚರ್ಚೆಗಳಿಗೆ ಕೆಲಸದ ಮೂಲಕ ಉತ್ತರ ನೀಡಲಾಗುತ್ತಿದೆ. ನಾಗನಾಳ ಸೋಮಣ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ