ಜಿಲ್ಲೆ

ಕಿರು ಉದ್ದಿಮೆಯಿಂದ ಆರ್ಥಿಕಾಭಿವೃದ್ಧಿ ಸಾಧಿಸಿ: ಶಾಸಕ ಎಂ.ಶ್ರೀನಿವಾಸ್ ಕಿವಿಮಾತು

reportermys

ಮಂಡ್ಯ: ಮಹಿಳೆಯರು ಸರ್ಕಾರ ನೀಡುವ 1 ಲಕ್ಷ ರೂ ಸಹಾಯಧನವನ್ನು ಬಳಸಿಕೊಂಡು ಕಿರು ಉದ್ದಿಮೆ ಸ್ಥಾಪಿಸುವ ಮೂಲಕ ತಾವೂ ಮುಂದುವರಿಯುವುದರ ಜತೆಗೆ ರಾಜ್ಯ ಮತ್ತು ದೇಶವನ್ನೂ ಆರ್ಥಿಕಾಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದು ಶಾಸಕ ಎಂ.ಶ್ರೀನಿವಾಸ್ ಕಿವಿಮಾತು ಹೇಳಿದರು.
ನಗರದ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅಮೃತ ಸ್ವಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ವಸಹಾಯ ಸಂಘಗಳಿಗೆ ಚೆಕ್ ವಿತರಿಸಿ ಮಾತನಾಡಿದರು. ಹುಟ್ಟಿನಿಂದಲೇ ಎಲ್ಲವನ್ನೂ ಕಲಿತಿರುವುದಿಲ್ಲ. ಕೆಲವನ್ನು ನೋಡಿ ಕಲಿಯಬೇಕು. ಮತ್ತೆ ಕೆಲವನ್ನು ಮಾಡಿ ಕಲಿಯಬೇಕು. ಇನ್ನು ಕೆಲವನ್ನು ಓದಿ ಕಲಿಯಬೇಕು ಎಂಬ ಗಾದೆ ಮಾತಿನಂತೆ ಈ ಯೋಜನೆ ಮಾಡಿ ಕಲಿಯುವ ರೀತಿಯಲ್ಲಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ರಾಜಮೂರ್ತಿ ಮಾತನಾಡಿ, ಮಹಿಳೆ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಲಾಯಿತು. ಅದರ ಮೂಲಕ ಆರ್ಥಿಕ ಚೇತರಿಕೆ ಕಾಣುವಂತಾಗಿದೆ ಎಂದರು.
ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ 2000ನೇ ಇಸವಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 100 ಕೋಟಿ ರೂಗೂ ಹೆಚ್ಚು ಉಳಿತಾಯ ಮಾಡಿದ್ದಾರೆ. ಹೀಗಾಗಿ ಮತ್ತಷ್ಟು ಅಭಿವೃದ್ಧಿಗೆ ಒತ್ತು ನೀಡಲು ಸರ್ಕಾರ ಕಿರು ಉದ್ದಿಮೆ ಸ್ಥಾಪನೆಗೆ 1 ಲಕ್ಷ ರೂ ನೀಡುತ್ತಿದೆ. ಪ್ರಾರಂಭದಲ್ಲಿ ಜಿಲ್ಲೆಗೆ 150 ಸಂಘಗಳಿಗೆ ಮಾತ್ರ ನೀಡಲು ಉದ್ದೇಶಿಸಿತ್ತು. ಶಾಸಕರು, ಜನಪ್ರತಿನಿಧಿಗಳ ಒತ್ತಡದಿಂದಾಗಿ 350 ಸಂಘಗಳಿಗೆ ನೀಡಲು ಸರ್ಕಾರ ಯೋಜನೆ ರೂಪಿಸಿದೆ. ಅದರಲ್ಲಿ ಮಂಡ್ಯ ತಾಲೂಕಿಗೆ 40 ಸಂಘಗಳಿಗೆ ನೀಡುತ್ತಿದೆ ಎಂದರು.
ನಗರಸಭಾಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, 10 ಸಾವಿರ ರೂನಿಂದ ಲಕ್ಷಾಂತರ ರೂ ಹೂಡಿಕೆ ಮಾಡಿ ಉದ್ದಿಮೆ ಸ್ಥಾಪನೆಗೆ ಅವಕಾಶಗಳಿವೆ. ಸ್ವಸಹಾಯ ಸಂಘಗಳು ಯಾವ ಉದ್ದಿಮೆ ಸ್ಥಾಪಿಸಿದರೆ ಹೆಚ್ಚು ಲಾಭ ಬರುತ್ತದೆ. ಮತ್ತು ಅದರಿಂದ ಏನೇನು ಲಾಭಗಳಾಗುತ್ತದೆ. ಸಮಾಜಕ್ಕೆ ಅದರಿಂದ ಏನು ಲಾಭ ಎಂಬದರ ಬಗ್ಗೆ ಚಿಂತನೆ ನಡೆಸಿ ಕಿರು ಉದ್ದಿಮೆಗಳನ್ನು ಸ್ಥಾಪಿಸಿ ಅದರಿಂದ ಹೆಚ್ಚು ಲಾಭ ಮಾಡಿಕೊಂಡು ದ್ವಿಗುಣಗೊಳಿಸಿಕೊಳ್ಳುವಂತೆ ಕರೆ ನೀಡಿದರು.
ನಗರಸಭಾ ಸದಸ್ಯೆ ಮಂಜುಳಾ ಉದಯಶಂಕರ್, ಸಿಪಿಡಿಒಗಳಾದ ನಂಜಮ್ಮಣ್ಣಿ, ಅಂಬಿಕಾ, ಮೇಲ್ವಿಚಾರಕರಾದ ಶಕುಂತಲಾ ಬಡಿಗೇರ್, ರೇಖಾ, ಚಂಪಾ, ಲಕ್ಷ್ಮೀ ಇತರರಿದ್ದರು.