ಮಂಗಳೂರು: ಲೋನ್ ಆ್ಯಪ್ ಮೂಲಕ ಸಾಲ ಪಡೆದ ಯುವತಿಯೋರ್ವಳಿಂದ ಹೆಚ್ಚಿನ ಹಣಕ್ಕೆ ಬೇಡಿಕೆ ಮುಂದಿಟ್ಟು ನಗ್ನ ಚಿತ್ರ ವೈರಲ್ ಮಾಡುವ ಬೆದರಿಕೆ ಹಾಕಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯೋರ್ವಳು ಕಳೆದ ಎ.15ರಂದು ಗೂಗಲ್ ಪ್ಲೇ ಸ್ಟೋರ್‌ನಿಂದ ‘ಕ್ವಿಕ್ ಮನಿ’ ಎಂಬ ಲೋನ್ ಆ್ಯಪ್ ಡೌನ್‌ಲೋಡ್ ಮಾಡಿದ್ದಳು. ಅದರಲ್ಲಿ 10,000 ರೂ. ಸಾಲಕ್ಕೆ ಅಪ್ಲೈ ಮಾಡಿದ್ದಳು. ಆಕೆಯ ಖಾತೆಗೆ ಕೂಡಲೇ 7,500 ರೂ. ಜಮೆ ಆಗಿತ್ತು. ಕೆಲವು ದಿನಗಳ ಅನಂತರ ಅದನ್ನು ಮರುಪಾವತಿ ಮಾಡಿದ್ದಳು. ಆ ಬಳಿಕ ಹಲವು ವಾಟ್ಸ್‌ಆ್ಯಪ್ ಸಂಖ್ಯೆಗಳಿಂದ ಕರೆ ಮಾಡಿದ ಅಪರಿಚಿತರು ಕಡ್ಡಾಯವಾಗಿ ಪುನಃ ಸಾಲ ಪಡೆಯಬೇಕು ಎಂದು ಒತ್ತಾಯಿಸಿದರು. ಆಕೆಯ ಖಾತೆಗೆ 14,000 ರೂ. ಜಮೆ ಮಾಡಿದರು. ಅದನ್ನು ಕೂಡ ಯುವತಿ ಮರುಪಾವತಿ ಮಾಡಿದ್ದಳು. ಆದರೂ ಆಕೆಗೆ ಕರೆ ಮಾಡಿದ ಅಪರಿಚಿತರು ಹೆಚ್ಚಿನ ಹಣ ಪಾವತಿ ಮಾಡುವಂತೆ ಒತ್ತಾಯಿಸಿದರು. ಆಕೆಯ ಖಾತೆಯಿಂದ 51,000 ರೂ.ಗಳನ್ನು ವರ್ಗಾಯಿಸಿಕೊಂಡರು. ಅನಂತರ ದಿನಗಳಲ್ಲಿಯೂ ಹೆಚ್ಚಿನ ಹಣ ನೀಡುವಂತೆ ಒತ್ತಾಯಿಸಿದರು. ಒಂದು ವೇಳೆ ಹಣ ನೀಡದಿದ್ದರೆ ಆಕೆಯ ಪೊಟೋವನ್ನು ಹುಡುಗನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ ಅದನ್ನು ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸುವುದಾಗಿಯೂ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ.