ಮಂಡ್ಯ: ಹಮಾಲಿ ಕಾರ್ಮಿಕರು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಬೇಡಿಕೆಯನ್ನು ಆ.15ರೊಳಗೆ ಈಡೇರಿಸದಿದ್ದರೆ ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರ ಒಕ್ಕೂಟದಿಂದ ಆ.16ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಕರ್ನಾಟಕ ಶ್ರಮಿಕ ಶಕ್ತಿ ಹಾಗೂ ಲೋಡಿಂಗ್ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ವರದರಾಜೇಂದ್ರ ತಿಳಿಸಿದರು.
ಅನ್ನಭಾಗ್ಯ ಜಾರಿ ಮಾಡುವ ಹಮಾಲಿ ಕಾರ್ಮಿಕರಿಗೆ ಗ್ರಾಮಾಂತರ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಮೇಲೆ ಜಿಲ್ಲಾಧಿಕಾರಿಗಳು ನೀಡಿದ ಆದೇಶ ಜಾರಿಯಾಗಿಲ್ಲ. ಈ ಬಗ್ಗೆ ಆ.8 ರಂದು ನಡೆಸಲು ಉದ್ದೇಶಿಸಿದ್ದ ಧರಣಿಯನ್ನು ಪ್ರಸ್ತುತ ಮಳೆಯಿಂದ ಜನರು ನೊಂದಿದ್ದು, ಪಡಿತರ ಪೂರೈಕೆಗೆ ತೊಂದರೆ ಆಗಬಾರದು ಎನ್ನುವ ನಿಟ್ಟಿನಿಂದ ಕೈಬಿಡಲಾಗಿದೆ. ಪಡಿತರ ಪೂರೈಕೆ ಮಾಡಿ ಆ.16ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹತ್ತು ವರ್ಷಗಳಿಂದ ನಿಗಮದ ಕೆ.ಎಫ್.ಸಿ.ಎಸ್.ಸಿ ಮತ್ತು ಟಿ.ಎ.ಪಿ.ಸಿ.ಎಂ.ಎಸ್. ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರು ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದೇವೆ. ಒಕ್ಕೂಟದಿಂದ ನಿರಂತರ ಹೋರಾಟದ ಕಾರಣಕ್ಕಾಗಿ ಇಎಸ್ ಐ ಮತ್ತು ಪಿಎಫ್ ಸೇರಿದಂತೆ ಹಲವು ಕಾರ್ಮಿಕ ಕಾನೂನುಗಳನ್ನು ಜಾರಿಗೆ ಬಂದಿವೆ. ಈ ಕಾನೂನುಗಳನ್ನು ಜಾರಿ ಮಾಡಲು ಮೀನಮೇಷ ಎಣಿಸುತ್ತಿರುವುದನ್ನು ವಿರೋಧಿಸಿ ಧರಣಿ ಆರಂಭಿಸಲಾಗಿದೆ ಎಂದರು.
ಹಮಾಲಿ ಕಾರ್ಮಿಕರು ಹಾಗೂ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರ ಬೇಡಿಕೆ ಈಡೇರಿಸುವಂತೆ ಕೋರ್ಟ್ ಆದೇಶಿಸಿದೆ. ಜತೆಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿದ್ದರೂ ಸಹ ಕಾನೂನು ಜಾರಿ ಮಾಡಿಲ್ಲ. ಗ್ರಾಮಾಂತರ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರು ಕಾರ್ಮಿಕರಿಗೆ ಕಟ್ಟಬೇಕಾದ ಇಎಸ್‌ಐ ಮತ್ತು ಪಿಎಫ್ ಪಾವತಿ ಬಾಕಿ ಹಣ ಪಾವತಿ ಮಾಡಿಲ್ಲ. ಅನಿರ್ದಿಷ್ಟಾವಧಿ ಹೋರಾಟಕ್ಕೆ ಎಡೆಮಾಡಿಕೊಡದೆ ತಕ್ಷಣವೇ ನಮ್ಮ ಬೇಡಿಕೆ ಈಡೇರಿಸದಿದ್ದರೆ, ಪ್ರಗತಿಪರರು ಹಾಗೂ ಶ್ರಮಿಕ ಸಂಘಟನೆಗಳ ಬೆಂಬಲದೊಂದಿಗೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮಾ, ಲೋಡಿಂಗ್ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಪ್ರಕಾಶ್, ಪುಟ್ಟಸ್ವಾಮಿ, ಮಹದೇವು, ಎಚ್.ಮುತ್ತಯ್ಯ ಇದ್ದರು.