ಜಿಲ್ಲೆ

ಇಎಸ್‌ಐ, ಪಿಎಫ್ ಹಣ ಬಿಡುಗಡೆಗೊಳಿಸಿ: ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸ ಮಾಡುವ ಹಮಾಲಿಗಳಿಗೆ ಇಎಸ್‌ಐ ಮತ್ತು ಪಿಎಫ್ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕಾರ್ಮಿಕರ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸರ್‌ಎಂ.ವಿ.ಪ್ರತಿಮೆ ಎದುರು ಜಮಾವಣೆಗೊಂಡ ಕಾರ್ಯಕರ್ತರು, ಬಳಿಕ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಆಹಾರ ನಿಗಮದ ಕೆಎಫ್‌ಸಿಎಸ್‌ಸಿ ಹಾಗೂ ಟಿಎಪಿಸಿಎಂಎಸ್ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸ ಮಾಡುವ ಹಮಾಲಿ ಕಾರ್ಮಿಕರಿಗೆ ಸರ್ಕಾರವೇ ಟೆಂಡರ್ ನಿಯಮಾವಳಿಯಲ್ಲಿ ಇಎಸ್‌ಐ ಮತ್ತು ಪಿಎಫ್ ಕಡ್ಡಾಯ ಮಾಡಿದೆ. ಅದರೆ ಇದನ್ನು ಕೆಲವರು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.

2018 ರಿಂದ 2023ರ ಅವಧಿಯಲ್ಲಿ ಕೆಲ ಗುತ್ತಿಗೆದಾರರು ಇಎಸ್‌ಐ, ಪಿಎಫ್ ಪಾವತಿ ಬಾಕಿ ಉಳಿಸಿಕೊಂಡಿವೆ. ಸರ್ಕಾರದ ಆದೇಶವನ್ನು ಗಾಳಿಗೆ ತೂರಲಾಗಿದೆ. ಆಹಾರ ಇಲಾಖೆಯ ಆಯುಕ್ತರು 2025 ಏ.8 ರಂದು ಸ್ಪಷ್ಟೀಕರಣ ನೀಡಿ ಆದೇಶ ಮಾಡಿದ್ದು, ಆದರೂ ಪ್ರಯೋಜನವಾಗಿಲ್ಲ. ಇದು ಆಹಾರ ಧಾನ್ಯಗಳ ಎತ್ತುವಳಿ ಟೆಂಡರ್ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಕ್ರಿಮಿನಲ್ ಪ್ರಕರಣವಾಗಿದ್ದು, ಕೂಡಲೇ ಸಾಗಾಣಿಕೆ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಆಯುಕ್ತರ ಆದೇಶದ ಮೇರೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿಯ ಸಭೆಯನ್ನು ತಕ್ಷಣವೇ ನಡೆಸಿ ಮುಂದೆ ಕನಿಷ್ಟ ಆರು ತಿಂಗಳಿಗೊಮ್ಮೆ ಸಭೆ ಕರೆಯಬೇಕು. ಎಲ್ಲ ಸಮಸ್ಯೆಗಳನ್ನು ಚರ್ಚಿಸಿ ಸೂಕ್ತ ಪರಿಹಾರಕ್ಕೆ ಕ್ರಮವಹಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ನರಸಿಂಹ, ದೇವರಾಜು, ವರದರಾಜೇಂದ್ರ, ತಮ್ಮನಾಯಕ, ವಿನೋದ್, ಮುತ್ತಯ್ಯ, ಮಹೇಶ್ ಇತರರಿದ್ದರು.