ಜಿಲ್ಲೆ

ಬೇಸಿಗೆ ಮುನ್ನವೇ ಲೋಡ್​ ಶೆಡ್ಡಿಂಗ್​

ಕೋಲಾರ ಡೆಸ್ಕ್

ಎನ್​.ಮುನಿವೆಂಕಟೇಗೌಡ ಕೋಲಾರ: ಬೇಸಿಗೆ ಪ್ರಾರಂಭವಾಗುತ್ತಿದ್ದು, ಬೆಸ್ಕಾಂ ಅಧಿಕಾರಿಗಳು ನೇರವಾಗಿ ವಿದ್ಯುತ್​ ಕಡಿತಗೊಳಿಸದೆ ಜನರನ್ನು ಮರಳು ಮಾಡುತ್ತಿದ್ದು, ರಿಪೇರಿ ನೆಪದಲ್ಲಿ ದಿನಪೂರ್ತಿ ವಿದ್ಯುತ್​ ಸರಬರಾಜು ನಿಲ್ಲಿಸುತ್ತಿದ್ದು, ದಿನಕ್ಕೆ ಸೀಮಿತ ಅವಧಿ ಮಾತ್ರ ಪೂರೈಸುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

ಸರ್ಕಾರ ಏಕಾಏಕಿ ಲೋಡ್​ ಶೆಡ್ಡಿಂಗ್​ ಮಾಡಿದರೆ ಜನರು ತಿರುಗಿ ಬೀಳುತ್ತಾರೆ ಎಂದು ಅಧಿಕಾರಿಗಳ ಮೂಲಕ ರಿಪೇರಿ ಹೆಸರಿನಲ್ಲಿ ವಿದ್ಯುತ್​ ಕಡಿತಕ್ಕೆ ಮುಂದಾಗಿದ್ದು, ಈ ಮೂಲಕ ವಿದ್ಯುತ್​ ಉಳಿತಾಯ ಮಾಡಲು ಬೆಸ್ಕಾಂ ಹೊರಟಿದೆ. ಬೇಸಿಗೆಯಲ್ಲಿ ಇದೇ ಆಟ ಮುಂದುವರೆದರೆ ರೈತ ಸಂಘಟನೆಗಳು ಮತ್ತು ಸಾರ್ವಜನಿಕರು ಸರ್ಕಾರ ಮತ್ತು ಇಲಾಖೆ ವಿರುದ್ಧ ತಿರುಗಿ ಬೀಳುವ ಕಾಲ ದೂರವಿಲ್ಲ.

ರೈತರು ಟೊಮ್ಯಾಟೊ ಸೇರಿ ತರಕಾರಿ ಬೆಳೆಗಳನ್ನು ಬೆಳೆಯಲು ಸಿದ್ಧತೆ ಕೈಗೊಂಡದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಸಮೀಪಿಸುತ್ತಿದ್ದು, ಬೇಗೆ ಹೆಚ್ಚುತ್ತಿರುವ ಹೊತ್ತಿನಲ್ಲೇ ಇಲಾಖೆ ಪವರ್​ ಕಟ್​ ಮುನ್ಸೂಚನೆ ನೀಡುತ್ತಿದೆ. ಈಗಾಗಲೇ ಅಲ್ಲಲ್ಲಿ ವಿದ್ಯುತ್​ ಸಮಸ್ಯೆ ಉಂಟಾಗುತ್ತಿದ್ದು, ರೈತರು ಲಕ್ಷಾಂತರ ರೂ.ಗಳು ಬಂಡವಾಳ ಹಾಕಿ ಬೆಳೆ ಮಾಡಿದ್ದು, ವಿದ್ಯುತ್​ ಕೈ ಕೊಡಬಹುದೆಂಬ ಆತಂಕ ಎದುರಿಸುವಂತಾಗಿದೆ.

ಕಳೆದ ಎರಡು ವರ್ಷಗಳಿಂದ ಸರಿಯಾಗಿ ಮಳೆ ಬೀಳದ ಕಾರಣ ಅಂತರ್ಜಲಮಟ್ಟ ಕುಸಿದಿದ್ದು, ಕೊಳವೆ ಬಾವಿಗಳಲ್ಲಿ ನೀರು ಪಾತಾಳಕ್ಕೆ ಕುಸಿದಿದೆ. ಇನ್ನು ಬೇಸಿಗೆ ಸಮೀಪಿಸುತ್ತಿದ್ದಂತೆ ಮತ್ತಷ್ಟು ಕೆಳಕ್ಕೆ ಹೋಗಿರುವುದರಿಂದ ನೀರು ಮೇಲೆತ್ತಲು ಹೆಚ್ಚಿನ ವಿದ್ಯುತ್​ ಬಳಕೆ ಆಗುತ್ತದೆ. ಇದರಿಂದ ಇರುವ ಟ್ರಾನ್ಸ್​ಫಾರ್ಮರ್​ಗಳು ಕೈ ಕೊಡುವ ಆತಂಕ ರೈತರಲ್ಲಿ ಕಾಡುತ್ತಿದೆ.

ಜಿಲ್ಲೆಯ ಬಹುತೇಕ ಬೆಸ್ಕಾಂ ಹೊರ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಲೈನ್​ಮನ್​ಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ರಾತ್ರಿ ವಿದ್ಯುತ್​ ನೀಡುವ ಶ್ಟ್​ಿ ಸಮಯ ತಿಳಿಸದ್ದರಿಂದ ರೈತರು ರಾತ್ರಿಯಿಡೀ ನಿದ್ದೆಗೆಡಬೇಕಾದ ಪರಿಸ್ಥಿತಿ ಇದೆ ಎಂದು ರೈತರು ಆರೋಪಿಸಿದ್ದಾರೆ.

ಸಿಬ್ಬಂದಿ ಕೊರತೆ

ರೈತರೊಂದಿಗೆ ಒಡನಾಟದಲ್ಲಿರುವ ಲೈನ್​ಮನ್​ಗಳು ಮತ್ತು ಮೇಲಾಧಿಕಾರಿಗಳನ್ನು ಕೇಳಿದರೆ ನಮ್ಮಲ್ಲಿ ಸಿಬ್ಬಂದಿ ಕೊರತೆ ಇದೆ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಕಾರಣ ಆಗಾಗ ವಿದ್ಯುತ್​ ಫೀಡರ್​ಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಒಂದು ಊರಿನಿಂದ ಮತ್ತೊಂದು ಊರಿನ ಕಡೆ ರಾತ್ರಿ ವೇಳೆ ಹೋಗಲು ಸಮಸ್ಯೆಯಾಗುತ್ತಿದೆ. ತಡವಾದರೂ ರಿಪೇರಿ ಮಾಡಿ ವಿದ್ಯುತ್​ ಸರಬರಾಜು ಮಾಡುತ್ತಿದ್ದೇವೆ ಎಂದು ಸಬೂಬು ಹೇಳುತ್ತಿದ್ದಾರೆ.

"ಬೆಸ್ಕಾಂ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಕೈ ಕಟ್ಟಿ ಕುಳಿತಿಲ್ಲ. ಇರುವ ಸಿಬ್ಬಂದಿಯೊಂದಿಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡು ಕಾಲ ಕಾಲಕ್ಕೆ ವಾಟ್ಸಾಪ್​ ಮೂಲಕ ಮಾಹಿತಿ ನೀಡುತ್ತಾ, ಸಮರ್ಪಕ ವಿದ್ಯುತ್​ ನೀಡುತ್ತಿದ್ದೇವೆ. ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವಿದ್ಯುತ್​ ಸರಬರಾಜು ಮಾಡಲು ಸರ್ಕಾರ ಮತ್ತು ಹಿರಿಯ ಅಧಿಕಾರಿಗಳ ಸೂಚನೆ ಪಾಲಿಸುತ್ತೇವೆ. ಯಾವುದೇ ಗ್ರಾಮದಲ್ಲಿ ವಿದ್ಯುತ್​ ಸಮಸ್ಯೆಯಾದರೆ ದೂರವಾಣಿ ಮೂಲಕ ಮಾಹಿತಿ ನೀಡಿದರೆ ಸ್ಪಂದಿಸುವ ಕೆಲಸ ಮಾಡುತ್ತೇವೆ. ರೈತರು ಆತಂಕ ಪಡುವ ಅವಶ್ಯ ಇಲ್ಲ."

 -ಶುಭ, ಕಾರ್ಯಪಾಲಕ ಅಭಿಯಂತರರು, ಬೆಸ್ಕಾಂ, ಕೋಲಾರ

ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ವಿದ್ಯುತ್​ ಸಮಸ್ಯೆ ಉಂಟಾಗದ ರೀತಿ ಸಮರ್ಪಕವಾಗಿ ವಿದ್ಯುತ್​ ಪೂರೈಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ಬೇಸಿಗೆ ಎದುರಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಲೋಡ್​ ಶೆಡ್ಡಿಂಗ್​ ಮಾಡಲು ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆ ರೀತಿ ಬಂದರೆ ಮೊದಲೇ ಸಾರ್ವಜನಿಕರಿಗೆ ಮಾಹಿತಿ ನೀಡುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ವಿದ್ಯುತ್​ ಸಮಸ್ಯೆ ಉಂಟಾಗಿಲ್ಲ.

- ಮೃತ್ಯುಂಜಯ, ಅಧೀಕ್ಷಕ ಅಭಿಯಂತರರು, ಬೆಸ್ಕಾಂ, ಕೋಲಾರ

"ಆಗಾಗ ವಿದ್ಯುತ್​ ಕಡಿತಗೊಳಿಸುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ರಿಪೇರಿ ಹೆಸರೇಳುತ್ತಾರೆ. ವಾರಕ್ಕೆ 2 ರಿಂದ 3 ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಲ್ಲಲ್ಲಿ ರಿಪೇರಿ ನೆಪದಲ್ಲಿ ವಿದ್ಯುತ್​ ತೆಗೆದು ಉಳಿತಾಯ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇವರ ಕಳ್ಳಾಟ ಹೆಚ್ಚು ದಿನ ನಡೆಯಲ್ಲ. ರೈತರ ಕೈಗೆ ಸಿಕ್ಕಿ ಬೀಳುತ್ತಾರೆ."

 -ಶ್ರೀರಾಮರೆಡ್ಡಿ

ರೈತ ಸಂಘದ ಹಸಿರು ಸೇನೆಯ ಶ್ರೀನಿವಾಸಪುರ ತಾಲೂಕು ಅಧ್ಯಕ್ಷ

ವಿದ್ಯುತ್​ ಉಳಿತಾಯಕ್ಕೆ ಮುಂದಾಗಿರುವ ಇಲಾಖೆ ಈಗಾಗಲೇ ವಿವಿಧ ಭಾಗಗಳಲ್ಲಿ ರಿಪೇರಿ ಹೆಸರಿನಲ್ಲಿ ವಾರಕ್ಕೊಂದು ದಿನಪೂರ್ತಿ ಸರಬರಾಜು ನಿಲ್ಲಿಸಲಾಗುತ್ತಿದೆ. ಇದರಿಂದ ರೈತರು ಬೆಳೆ ಬೆಳೆಯಲು ಹಿಂಜರಿಯುವಂತಾಗಿದೆ. ಸರ್ಕಾರ ಉಚಿತ ಯೋಜನೆ ನಿಲ್ಲಿಸಿದರೂ ಪರವಾಗಿಲ್ಲ. ಬೇಸಿಗೆಯಲ್ಲಿ ವಿದ್ಯುತ್​ ಅಭಾವ ಆಗದಂತೆ ರೈತರನ್ನು ಕಾಪಾಡುವ ಕೆಲಸ ಮಾಡಲಿ.

 -ನಾರಾಯಣಸ್ವಾಮಿ ರೈತ ಸಂಘದ ಮುಖಂಡ