ಚಾಮರಾಜನಗರ: ಡೆಡ್ಲಿ ಕರೊನಾ ಕಾಟಕ್ಕೆ ಸುಮಾರು 2 ತಿಂಗಳಿನಿಂದ ರಸ್ತೆಗಿಳಿಯದೆ ನಿಂತಿದ್ದ ಖಾಸಗಿ ಬಸ್‌ಗಳ ಲಾಕ್‌ಡೌನ್‌ನ ನಿಯಮಗಳು ಸಡಿಲಿಕೆಗೊಂಡು ಬಸ್‌ಗಳ ಬಂಡಿ ತಿರುಗಲಾರಂಭಿಸಿದರೂ ಮಾಲೀಕರಿಗೆ ಆದಾಯವಿಲ್ಲದಂತಾಗಿದೆ.
ರಾಜ್ಯ ಸರ್ಕಾರ ಕೆಲುವು ಷರತ್ತುಗಳ ಮೇರೆಗೆ ಖಾಸಗಿ ಬಸ್‌ಗಳನು ಕರೊನಾ ಮುಂಜಾಗ್ರತೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿ ಸಂಚಾರಕ್ಕೆ ಅನುಮತಿ ನೀಡಿತ್ತಾದರೂ ಯಾವುದೇ ಸಾರಿಗೆ ಉದ್ಯಮ ಚಿಗುರಲಿಲ್ಲ. ನಿಯಮಗಳ ಪಾಲನೆಯ ಅನಿವಾರ್ಯತೆಯಿಂದ ಬಸ್‌ಗಳಲ್ಲಿ ಕೇವಲ 30 ಜನರಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ. ಇಷ್ಟು ಜನರನ್ನು ಬಸ್ ಹತ್ತಿಸಿಕೊಂಡು ಓಡಾಡಿದರೆ ಹಾಕಿಸಿರುವ ಡೀಸೆಲ್ ಬಂಡವಾಳವೂ ಸಿಗುವುದಿಲ್ಲ ಎನ್ನುವ ವಾಸ್ತವತೆಯೊಂದಿಗೆ ಪ್ರಸ್ತುತ ಕರೊನಾ ಭಯಕ್ಕೆ ಜನರು ಖಾಸಗಿ ಬಸ್‌ಗಳನ್ನು ಹತ್ತದಿರುವುದೂ ಕೂಡ ಖಾಸಗಿ ಬಸ್‌ಗಳಿಗೆ ಹೊಡೆತ ಕೊಟ್ಟಿದೆ.
ಕರೊನಾ ಭಯದಿಂದ ಬಸ್ ಹತ್ತದ ಜನ: ಕರೊನಾ ಹಿನ್ನೆಲೆ ಜಾರಿಯಾಗಿದ್ದ ಲಾಕ್‌ಡೌನ್ ಅನ್ನು ದಿನ ಕಳೆದಂತೆ ಆರ್ಥಿಕತೆಯ ಚೇತರಿಕೆಯ ಉದ್ದೇಶದಿಂದ ಸಡಿಲಗೊಳಿಸಿ ಅನೇಕ ಸೇವೆಗಳನ್ನು ಆರಂಭಿಸಲಾಗಿದೆ. ಆದರೆ ಲಾಕ್‌ಡೌನ್ ನಿಯಮಗಳು ಮಾತ್ರ ಸಡಿಲಿಕೆಗೊಂಡಿವೆ.
ಕರೊನಾ ಬಗ್ಗೆ ಜಾಗೃತಿ ಇರುವ ಜಿಲ್ಲೆಯ ಸಾರ್ವಜನಿಕರು ಒಂದೆಡೆಯಿಂದ ಮತ್ತೊಂದೆಡೆಗೆ ಸಂಚರಿಸುವುದನ್ನು ಕಡಿಮೆ ಮಾಡಿದ್ದಾರೆ. ಪರಿಣಾಮ ಮೊದಲಿನಂತೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರು ಕಂಡುಬರುತ್ತಿಲ್ಲ. ಜತೆಗೆ ಖಾಸಗಿ ಬಸ್‌ಗಳಿಗೂ ಪ್ರಯಾಣಿಕರ ಕೊರತೆ ಎದುರಾಗಿದೆ.
ಮೇ 20ರಿಂದ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸೇವೆ ಆರಂಭಿಸಿದ ವೇಳೆಯಲ್ಲಿಯೂ ಎಷ್ಟೇ ಮುಂಜಾಗ್ರತೆ ವಹಿಸಿದರೂ ಕರೊನಾ ಸೃಷ್ಟಿಸಿರುವ ಭಯದಿಂದ ಬಸ್ ಸಂಚಾರದತ್ತ ಜನ ಮುಖ ಮಾಡುತ್ತಿಲ್ಲ. ಇನ್ನು ಖಾಸಗಿ ಬಸ್‌ಗಳಲ್ಲೂ ಅದೇ ಪರಿಸ್ಥಿತಿ ಮುಂದುವರೆದಿದ್ದು, ಕರೊನಾ ಕಾಲಿಡುವ ಮುಂಚೆ ಸದಾ ಜನರಿಂದ ಗಿಜಿಗುಡುತ್ತಿದ್ದ ನಿಲ್ದಾಣಗಳು ಬಿಕೋ ಎನ್ನುವ ಪರಿಸ್ಥಿ ನಿರ್ಮಾಣವಾಗಿದೆ.
ಕೈಯಿಂದಲೇ ಬಂಡವಾಳ: ಕೇವಲ 30 ಜನರಿಗೆ ಸೀಮಿತವಾಗಿರುವುದರಿಂದ ಬರುವ ಆದಾಯ ಡೀಸೆಲ್‌ನ ಹಣವೂ ಸಿಗದಂತಾಗಿದೆ ಎಂಬುದು ಮಾಲೀಕರ ಗೋಳು. ಕರೊನಾ ಭಯದಿಂದಾಗಿ ಜನ ಬಸ್ ಹತ್ತಲು ಭಯ ಬೀಳುತ್ತಿರುವುದರಿಂದ ಕೆಲವು ಸಂಧರ್ಭಗಳಲ್ಲಿ 4ರಿಂದ 5 ಸೀಟುಗಳಿದ್ದರೂ ಪ್ರಯಾಣಿಕರನ್ನು ಪಾಯಿಂಟ್‌ಗಳಿಗೆ ತಲುಪಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಪ್ರತಿ ನಿತ್ಯ ಡ್ರೈವರ್, ಕಂಡಕ್ಟರ್, ಕ್ಲೀನರ್‌ಗಳಿಗೆ ವೇತನ ಹಾಗೂ ಏಜೆಂಟ್‌ಗಳಿಗೆ ಕಮಿಷನ್ ನೀಡಿ ಆದಾಯವಿಲ್ಲದೆ ಕೈ ಸುಟ್ಟುಕೊಳ್ಳಬೇಕಾಗಿದೆ.
ಲಾಕ್‌ಡೌನ್ ಸಡಿಲಿಕೆ ನೀಡಿ ಖಾಸಗಿ ಬಸ್ ಸೇವೆ ಆರಂಭಿಸಲು ಅವಕಾಶ ನೀಡಿದ ಹಿನ್ನೆಲೆ ಕೆಲವು ಬಸ್‌ಗಳು ರಸ್ತೆಗಿಳಿದರೆ ಇನ್ನೂ ಬಹುತೇಕ ಬಸ್‌ಗಳ ಬಂಡಿ ಓಡದೆ ನಿಂತಿವೆ. ಕರೊನಾ ಭಯದಿಂದ ಒಂದಷ್ಟು ಜನ ಬಸ್ ಹಿಂಜರಿಯುತ್ತಿದ್ದಾರೆ. ರಸ್ತೆಗಿಳಿಸಿದರೆ ಕೈ ಸುಟ್ಟುಕೊಳ್ಳಬೇಕಾಗುತ್ತದೆ ಎಂದು ಅರಿತ ಎಷ್ಟೋ ಮಾಲಿಕರು ಸೇವೆ ಆರಂಭಿಸಲು ಹಿಂಜರಿಯುತ್ತಿದ್ದಾರೆ. ಸಭೆ ಸಮಾರಂಭಗಳು, ಮದುವೆ ಕಾರ್ಯ, ಜಾತ್ರೆಗಳು ಅದ್ದೂರಿಯಾಗಿ ನಡೆಯದ ಕಾರಣ ಜನ ಸಂಚಾರ ವಿರಳವಾಗಿರುವುದೂ ಕೂಡ ಬಸ್ ಆದಾಯಕ್ಕೆ ಒಂದು ರೀತಿ ಪೆಟ್ಟು ಕೊಟ್ಟಿದೆ.
ಆಟೋಗಳಿಂದ ತೊಡಕು: ಕರೊನಾ ವೈರಸ್ ಹಾವಳಿ ಶುರುವಾದ ನಂತರ ಖಾಸಗಿ ಬಸ್ ನಿಲ್ದಾಣಗಳನ್ನೇ ಜನ ಮರೆತು ಬಿಟ್ಟದ್ದಾರೆ. ಆಟೋಗಳ ಹಾವಳಿಯಿಂದಾಗಿ ಖಾಸಗಿ ಬಸ್‌ಗಳಿಗೆ ಆದಾಯವೆಲ್ಲ ಖೋತಾ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಆಗಮಿಸುವ ಪ್ರಯಾಣಿಕರು ಆಟೋಗಳನ್ನೇ ಅವಲಂಬಿಸಿದ್ದಾರೆ. ಬಸ್‌ಗಳಲ್ಲಿ 30 ಜನರನ್ನು ಹತ್ತಿಸಿಕೊಳ್ಳುವಷ್ಟರಲ್ಲಿ ತಾಳ್ಮೆ ಇಲ್ಲದ ಜನತೆ ಆಟೋಗಳು ಬೇಗ ಭರ್ತಿಯಾಗುವುದರಿಂದ ಪ್ರಯಾಣಿಕರು ಆಟೋಗಳ ಮೊರೆ ಹೋಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 180 ಬಸ್‌ಗಳಿದ್ದು, ಜೂ.1ರಿಂದ ಸೇವೆಗೆ ಅನುಮತಿ ನೀಡಿದ ಹಿನ್ನೆಲೆ 20 ಬಸ್‌ಗಳು ಮಾತ್ರ ರಸ್ತೆಗಿಳಿದಿವೆ.
ಕರೊನಾ ಭಯದಿಂದ ಜನ ಸಂಚಾರ ವಿರಳವಾಗಿರುವುದರಿಂದ ಇನ್ನೂ 160 ಬಸ್‌ಗಳು ನಷ್ಟದ ಲೆಕ್ಕಾಚಾರದಿಂದ ಸೇವೆ ಆರಂಭಿಸದೇ ನಿಂತಲ್ಲೆ ನಿಂತಿವೆ. ಜಿಲ್ಲೆಯಿಂದ ಮೈಸೂರು, ಪಾಲಾರ್, ಕೊಯಮತ್ತೂರು, ಮೇಟೂರು, ಈರೋಡ್, ಕೇರಳದ ಕ್ಯಾಲಿಕಟ್, ಗುರುವಾಯೂರಿಗೂ ಖಾಸಗಿ ಬಸ್‌ಗಳ ಸೇವೆ ಇತ್ತು. ಮಹದೇಶ್ವರ ಬೆಟ್ಟಕ್ಕೆ ಸಹಸ್ರಾರು ಭಕ್ತರು ಭೇಟಿ ನೀಡುತ್ತಿದ್ದು, ಪ್ರತಿ ದಿನ 28 ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಜಿಲ್ಲೆಯಲ್ಲಿ 240 ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ಮುಂಜಾಗ್ರತೆ ಹಾಗೂ ಸುರಕ್ಷತೆ ದೃಷ್ಠಿಯಿಂದಾಗಿ ಜನರು ಖಾಸಗಿ ಬಸ್‌ಗಿಂತ ಸರ್ಕಾರಿ ಬಸ್‌ಗಳನ್ನೇ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಬಸ್‌ಗಿಂತ 10 ರೂ. ಹೆಚ್ಚು ಹಣ ನೀಡಿ ಆಟೋಗಳಲ್ಲೆ ಜನ ಸಂಚರಿಸುತ್ತಿರುವುದು ನಮಗೆ ಇನ್ನಷ್ಟ ನಷ್ಟು ಉಂಟು ಮಾಡಿದೆ. ಈ ಹಿಂದೆ ಹೇಗೋ ಕುಂಟುತ್ತಾ ಸಾಗುತ್ತಿದ್ದ ಖಾಸಗಿ ಬಸ್‌ಗಳ ಸೇವೆ ಕರೊನಾದಿಂದ ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ. ಇದೇ ರೀತಿ ಮುಂದುವರೆದರೆ ಜೂನ್ ಅಂತ್ಯದ ವೇಳೆಗೆ ಸೇವೆಯನ್ನು ನಿಲ್ಲಿಸಲು ತೀರ್ಮಾನಿಸಿದ್ದೇವೆ ಎನ್ನುತ್ತಾರೆ ಗಣೇಶ ಬಸ್ ಮಾಲೀಕ ನಂದೀಶ್.
ವರ್ಷಕ್ಕೆ 78 ಸಾವಿರ ಇನ್ಸೂರೆನ್ಸ್, ರಸ್ತೆಗಿಳಿಸಿದರೆ ಪ್ರತಿ ದಿನಕ್ಕೆ 500 ರೂ.ಗಳಂತೆ ರೋಡ್ ತೆರಿಗೆ ಕಟ್ಟಬೇಕಾಗುತ್ತದೆ. ಇದರಿಂದಾಗಿ ಲಾಕ್‌ಡೌನ್ ವೇಳೆ ಎಲ್ಲಾ ಬಸ್‌ಗಳನ್ನು ಆರ್‌ಟಿಒಗೆ ಸರೆಂಡರ್ ಮಾಡಿದ್ದೆವು. ಕರೊನಾ ಭಯದಿಂದ ಬಸ್ ಹತ್ತಲು ಜನ ಭಯ ಬೀಳುತ್ತಿರುವುದರಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಉದ್ದೇಶದಿಂದ ಬಸ್‌ಗಳನ್ನು ರಸ್ತೆಗಿಳಿಸಿಲ್ಲ. ಇನ್ನು ಪ್ರವಾಸೋದ್ಯಮಕ್ಕೆ ಅವಕಾಶವಿಲ್ಲದ ಕಾರಣ ಟೂರಿಸ್ಟ್ ಬಸ್‌ಗಳನ್ನು ಡಿಸೆಂಬರ್‌ವರೆಗೂ ನಿಲ್ಲಿಸಲು ತೀರ್ಮಾನಿಸಿದ್ದೇವೆ.
ರಾಜೀವ್, ಆಂಜನೇಯ ಖಾಸಗಿ ಬಸ್ ಮಾಲೀಕ, ಚಾಮರಾಜನಗರ.