ಜಿಲ್ಲೆ

ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ

ಅವಿನಾಶ್ ಜೈನಹಳ್ಳಿ

ಅವಿನಾಶ್ ಜೈನಹಳ್ಳಿ ಮೈಸೂರು

ಎಲ್‌ಕೆಜಿ, ಯುಕೆಜಿ ಶಿಕ್ಷಣ ಕೊಡಿಸುವ ಸಂಬಂಧ ಕನಸು ಕಾಣುತ್ತಿರುವ ಬಡಜನರಿಗೆ ಇಲ್ಲೊಂದಿದೆ ಸಿಹಿ ಸುದ್ದಿ...!

ಖಾಸಗಿ ವಿದ್ಯಾ ಸಂಸ್ಥೆಗಳ ಮಾದರಿಯಲ್ಲೇ ಪ್ರಾಥಮಿಕ ಪೂರ್ವ ಮಕ್ಕಳಿಗೆ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಜಿಲ್ಲೆಯ 250 ಕೇಂದ್ರಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಠ್ಯ ಬೋಧಿಸಲು ಸಿದ್ಧತಾ ಕಾರ್ಯಗಳು ಭರದಿಂದ ಸಾಗಿವೆ.

ಪಾಲಕರ ಆಂಗ್ಲ ಮಾಧ್ಯಮ ಶಿಕ್ಷಣ ಮತ್ತು ಖಾಸಗಿ ಶಾಲೆಗಳ ವ್ಯಾಮೋಹವನ್ನೇ ಬಂಡವಾಳ ಮಾಡಿಕೊಂಡು ಪ್ರೀ ಕೆಜಿ ಹೆಸರಿನಲ್ಲಿ ಲಕ್ಷಾಂತರ ಹಣ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಸಕ್ತ ಸಾಲಿನಿಂದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುತ್ತಿದೆ.

ಈಗಾಗಲೇ ಬೆಂಗಳೂರು ನಗರದ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಕಳೆದ ವರ್ಷ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದ್ದು, ಇದು ಯಶಸ್ವಿಯಾದ ಬೆನ್ನಲ್ಲೇ ರಾಜ್ಯಾದ್ಯಂತ ಈ ವರ್ಷದ ಅಕ್ಟೋಬರ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಮೂಲಕ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾಥಮಿಕ ಪೂರ್ವ ಮಕ್ಕಳಿಗೆ ಕಥೆ, ಹಾಡು, ಆಟಗಳೊಂದಿಗೆ ಪಾಠ ಹೇಳಲು ಸಿದ್ಧತೆ ನಡೆಸಲಾಗಿದೆ.

250 ಅಂಗನವಾಡಿ ಕೇಂದ್ರಗಳಲ್ಲಿ ಆರಂಭ: ಜಿಲ್ಲೆಯಲ್ಲಿ 2933 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ ಮೊದಲ ಹಂತದಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಈ ಕೇಂದ್ರಗಳ ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ಹಂತದ ತರಬೇತಿ ಆಯೋಜಿಸಲಾಗಿದೆ. ಈಗಾಗಲೇ ಮೊದಲ ಹಂತದ ತರಬೇತಿ ಪೂರ್ಣಗೊಂಡಿದ್ದು, 2ನೇ ಹಂತದ ತರಬೇತಿ ಆಯಾಯ ತಾಲೂಕು ಮಟ್ಟದಲ್ಲಿ ನಡೆಯುತ್ತಿದೆ. ತರಬೇತಿಯಲ್ಲಿ ಮಕ್ಕಳಿಗೆ ಪಾಠ ಹೇಳುವ ವಿಧಾನ, ಇಂಗ್ಲಿಷ್ ಭಾಷಾ ಜ್ಞಾನ ಮತ್ತು ಸಂವಹನ ಕೌಶಲವನ್ನು ತಿಳಿಸಿಕೊಡಲಾಗುತ್ತಿದೆ. ಮೈಸೂರು ನಗರದ 25 ಅಂಗನವಾಡಿ ಕೇಂದ್ರಗಳಲ್ಲಿ, ಮೈಸೂರು ತಾಲೂಕಿನ 29, ಎಚ್.ಡಿ.ಕೋಟೆಯ 20, ಕೆ.ಆರ್.ನಗರದ 25, ಬಿಳಿಗೆರೆ ವ್ಯಾಪ್ತಿಯಲ್ಲಿ 35, ತಿ.ನರಸೀಪುರ ತಾಲೂಕಿನಲ್ಲಿ 40, ಪಿರಿಯಾಪಟ್ಟಣ ತಾಲೂಕಿನಲ್ಲಿ 16, ನಂಜನಗೂಡಿನಲ್ಲಿ 30 ಹಾಗೂ ಹುಣಸೂರಿನ 30 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭವಾಗಲಿದೆ.

ಸುವರ್ಣ ಮಹೋತ್ಸವದಂದು ಉದ್ಘಾಟನೆ:

1975ರ ಅಕ್ಟೋಬರ್‌ನಲ್ಲಿ ದೇಶಾದ್ಯಂತ ಅಂಗನವಾಡಿ ಆರಂಭವಾಗಿದ್ದು, 2025ಕ್ಕೆ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಕ್ಟೋಬರ್‌ನಲ್ಲಿ ಸುವರ್ಣ ಮಹೋತ್ಸವ ಆಯೋಜಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವುದಕ್ಕೆ ಚಾಲನೆ ದೊರೆಯಲಿದೆ.

ಪಠ್ಯ ಪುಸ್ತಕ ಪೂರೈಕೆ

ಅಂಗನವಾಡಿ ಮಕ್ಕಳಿಗಾಗಿ ಆರಂಭಿಸಲಾಗುತ್ತಿರುವ ಪೂರ್ವ ಪ್ರಾಥಮಿಕ ಶಿಕ್ಷಣದ ಪಠ್ಯಪುಸ್ತಕ ಈಗಾಗಲೇ ಪೂರೈಕೆಯಾಗಿದ್ದು, ಜಿಲ್ಲೆಯ ಎಲ್ಲ ಅಂಗನವಾಡಿ ಮಕ್ಕಳಿಗೂ ತಲಾ ಮೂರು ಪುಸ್ತಕಗಳನ್ನು ವಿತರಿಸಲಾಗುತ್ತದೆ. ಜತೆಗೆ ಮಕ್ಕಳಿಗೆ ಪಠ್ಯ ಬೋಧನೆಗಾಗಿ ಅಂಗನವಾಡಿ ಕಾರ್ಯಕರ್ತೆಯರಿಗೂ ಮಾರ್ಗದರ್ಶನ ಪುಸ್ತಕವನ್ನು ನೀಡಲಾಗುತ್ತಿದೆ. ಒಂದು ಮಗುವಿಗೆ ಮೂರು ಪುಸ್ತಕಗಳಿರುವ ಒಂದು ಸೆಟ್ ನೀಡಲಿದ್ದು, ಸದ್ಯಕ್ಕೆ ಮೈಸೂರು ಜಿಲ್ಲೆ 50 ಸಾವಿರಕ್ಕೂ ಹೆಚ್ಚು ಪಠ್ಯಪುಸ್ತಕ ಪೂರೈಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಲಕರ ಮನವೊಲಿಕೆಗೆ ಯತ್ನ

ಅಂಗನವಾಡಿ ಕೇಂದ್ರಗಳಲ್ಲೂ ಖಾಸಗಿ ಶಾಲೆ ಮಾದರಿಯಂತೆ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುತ್ತಿದ್ದು, ತಮ್ಮ ಮಕ್ಕಳನ್ನು ಅಂಗನವಾಡಿಗೆ ಸೇರಿಸುವಂತೆ ಆಯಾಯ ಗ್ರಾಮ ಮತ್ತು ಬಡಾವಣೆಗಳಲ್ಲಿ ಪಾಲಕರ ಮನವೊಲಿಸುವ ಪ್ರಯತ್ನ ನಡೆಸಿದ್ದು, ಇದು ಬಹುಪಾಲು ಯಶಸ್ವಿಯಾಗಿದೆ. ಕೇಂದ್ರಗಳಲ್ಲಿ ಗುಣಮಟ್ಟದ ಆಹಾರ ವಿತರಣೆ ಜತೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವುದು ಇಲಾಖೆಯ ಧ್ಯೇಯವಾಗಿದ್ದು, ಇದಕ್ಕೆ ಹೆಚ್ಚು ಪಾಲಕರು ಅಂಗನವಾಡಿ ಕೇಂದ್ರಗಳಿಗೆ ಸ್ವಯಂಪ್ರೇರಿತವಾಗಿ ಮಕ್ಕಳನ್ನು ಸೇರಿಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ರೈತಾಪಿ, ಬಡ ವರ್ಗಕ್ಕೆ ಅನುಕೂಲ

ಅಂಗನವಾಡಿ ಕೇಂದ್ರಗಳಲ್ಲೂ ಆಂಗ್ಲ ಮಾಧ್ಯಮ ಶಿಕ್ಷಣದ ಜತೆಗೆ ಎಲ್‌ಕೆಜಿ, ಯುಕೆಜಿ ಆರಂಭಿಸುತ್ತಿರುವುದು ಗ್ರಾಮೀಣ ಭಾಗದ ರೈತಾಪಿ ವರ್ಗ, ಮಧ್ಯಮ ಮತ್ತು ಬಡ ಕುಟುಂಬದವರಿಗೆ ಆಸರೆಯಾಗಿದ್ದು, ತಮ್ಮ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕೆಂಬ ಕನಸಿಗೆ ಒತ್ತಾಸೆಯಾದಂತಾಗಿದೆ. ಈ ಮೂಲಕ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಲು ಲಕ್ಷಾಂತರ ಹಣ ಪೀಕುವ ಅಗತ್ಯವೂ ಇಲ್ಲದಂತಾಗಿದೆ.

ಜಿಲ್ಲೆಯಲ್ಲಿ 2,933 ಅಂಗನವಾಡಿ ಕೇಂದ್ರಗಳಿದ್ದು, ಈಗಾಗಲೇ ಅಲ್ಲಿನ ಮಕ್ಕಳಿಗೆ ಪ್ರೀ ಸ್ಕೂಲ್ ಪರಿಕಲ್ಪನೆಯಡಿ ಊಟ, ಆಟ, ಹಾಡಿನ ಜತೆಗೆ ಪಾಠ ಹೇಳಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯ ಎಲ್ಲ ಅಂಗನವಾಡಿ ಕಾರ್ಯಕರ್ತೆಯರಿಗೂ ತರಬೇತಿ ನೀಡಲಾಗಿದ್ದು, ಮಕ್ಕಳಿಗೆ ಓದುವುದು, ಬರೆಯುವುದನ್ನು ಕಲಿಸುವ ಜತೆಗೆ ಗಣಿತ ಹೇಳಿಕೊಡಲಾಗುತ್ತಿದೆ. ಈ ಮೂಲಕ ಅವರಲ್ಲಿ ದೈಹಿಕ, ಸಾಮಾಜಿಕ, ಭಾವನಾತ್ಮಕ, ನೈತಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿ ಮಾಡಲಾಗಿದೆ.

ಪೂರ್ವ ಪ್ರಾಥಮಿಕ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಉದ್ದೇಶದಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ. ಈ ಸಂಬಂಧ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿದೆ. ಅಂಗನವಾಡಿಯಲ್ಲೂ ಮಕ್ಕಳಿಗೆ ಇಂಗ್ಲಿಷ್ ಹೇಳಿಕೊಡಲಾಗುತ್ತದೆ. ಜಿಲ್ಲೆಯಲ್ಲಿ 2933 ಅಂಗನವಾಡಿ ಕೇಂದ್ರಗಳಿದ್ದು, ಆರಂಭದಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಲಾಗುತ್ತದೆ. ಬಸವರಾಜು, ಉಪ ನಿರ್ದೇಶಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೈಸೂರು