ಸರಗೂರು: ಸರ್ಕಾರ ಪ್ರತಿ ಕುಟುಂಬದಲ್ಲಿರುವ ಅರ್ಹರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಅನುಮೋದನೆ ಪತ್ರವನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಜಾರಿ ಮಾಡಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರೇಡ್2 ತಹಸಿಲ್ದಾರ್ ಪರಶಿವಮೂರ್ತಿ ತಿಳಿಸಿದರು.
ತಾಲೂಕಿನ ಬಿ.ಮಟಕರೆ ಗ್ರಾಪಂ ವ್ಯಾಪ್ತಿಯ ನೇಮ್ಮನಹಳ್ಳಿ ಹಾಡಿಯಲ್ಲಿ ಇತ್ತೀಚೆಗೆ ಕಂದಾಯ ಇಲಾಖೆ ವತಿಯಿಂದ ಆಯೋಜಿಸಿದ್ದ ಹೋಬಳಿ ಮಟ್ಟದ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಅನುದಾನ ಬಿಡುಗಡೆಗೊಳಿಸುತ್ತಿದೆ. ಆದರೆ ಇದು ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂಬ ಕಾರಣದಿಂದ ಪ್ರತಿ ತಿಂಗಳ 15 ರೊಳಗೆ ಜನರ ಬಳಿ ಹೋಗಿ ಅರ್ಹರನ್ನು ಗುರುತಿಸಿ ಮನೆ ಬಾಗಿಲಿಗೆ ಪಿಂಚಣಿ ಅನುಮೋದನೆ ಪತ್ರ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಕಂದಾಯ ನಿರೀಕ್ಷಕರು ಗ್ರಾಮಲೆಕ್ಕಿಗರಿಗೆ ತಮ್ಮ ಅರ್ಜಿ ಸಲ್ಲಿಸಬಹುದು. ಸ್ಥಳೀಯ ಮುಖಂಡರು ಅರ್ಹರನ್ನು ಗುರುತಿಸಲು ಇಲಾಖೆ ಅಧಿಕಾರಿಗಳಿಗೆ ಸಹಕರಿಸಬೇಕು ಎಂದರು.
ಉಪತಹಸೀಲ್ದಾರ್ ರವಿಂದ್ರ ಮಾತನಾಡಿ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ ನಾಲ್ಕು ವಿಭಾಗದಲ್ಲಿ ಸಾಮಾಜಿಕ ಭದ್ರತಾ ಯೋಜನೆ ಅಳವಡಿಸಲಾಗಿದೆ. ಆದರೆ ಫಲಾನುಭವಿಗಳು ಸ್ಥಳಿಯ ಬ್ಯಾಂಕ್‌ಗಳಲ್ಲಿ ಬ್ಯಾಂಕ್ ಖಾತೆ ಆರಂಭಿಸಿದರೆ ನೇರವಾಗಿ ಹಣ ಖಾತೆಗೆ ಜಮಾವಣೆಯಾಗಲಿದೆ. ಅರ್ಹರಿಗೆ ಪಿಂಚಣಿ ಪಡೆಯಲು ಸೂಕ್ತ ದಾಖಲಾತಿ ನೀಡಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ 27 ಫಲಾನುಭವಿಗಳಿಗೆ ಪಿಂಚಣಿ ಯೋಜನೆಯಡಿ ಆದೇಶ ಪತ್ರ ವಿತರಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲೇಶನಾಯಕ, ಮುಖಂಡರಾದ ನಾಗರಾಜು, ಬಾಡಗ ಮಣಿ,ಆರ್‌ಐ ಮುಜೀಬ್, ವಿಎ ನರಸಿಂಹಶೆಟ್ಟಿ, ಮಂಜುನಾಥ ಇದ್ದರು.