ಗಂಗೊಳ್ಳಿ: ಪ್ರಾಥಮಿಕ ಹಂತದಲ್ಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು ಎನ್ನುವ ಉದ್ದೇಶದಿಂದ ದಾನಿಗಳು ಮತ್ತು ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲಾಗಿದ್ದು, ನುರಿತ ಶಿಕ್ಷಕರಿಂದ ಬೋಧನೆ ಮಾಡಲಾಗುತ್ತಿದೆ ಎಂದು ಹೊಸಾಡು ಶಾಲೆ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಉಮೇಶ್ ಪುತ್ರನ್ ಹೇಳಿದರು.
ಬೈಂದೂರು ವಲಯದ ಹೊಸಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಕೊಠಡಿಗಳನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ರೇಖಾ ಗಣೇಶ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ, ನಿವೃತ್ತ ಮುಖ್ಯಶಿಕ್ಷಕ ಸದಾಶಿವ ಶೆಟ್ಟಿ, ಜ್ಯೋತಿ ಐತಾಳ್ ಮತ್ತು ತೇಜಪ್ಪ ಶೆಟ್ಟಿ, ನಿವೃತ್ತ ಶಿಕ್ಷಕರಾದ ಭಾಸ್ಕರ ಶೆಟ್ಟಿ, ಭಾಸ್ಕರ ಮಯ್ಯ, ಹೊಸಾಡು ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರ ಪೂಜಾರಿ ಅರಾಟೆ, ಎಂ.ಎಂ.ಸುವರ್ಣ, ನಿವೃತ್ತ ಪಶು ವೈದ್ಯ ಡಾ.ರಾಘವೇಂದ್ರ ಶೆಟ್ಟಿ, ಪಾಲಕರು, ಶಿಕ್ಷಕರು, ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ರಾಜೇಶ್ ಸ್ವಾಗತಿಸಿದರು. ಪ್ರೊ.ಸುರೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಪ್ರದೀಪ ಆಚಾರ್ಯ ವಂದಿಸಿದರು. ಸಾಂಪ್ರದಾಯಿಕ ಶೈಲಿಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ ಮಾಡಲಾಯಿತು.