ಪಾವಗಡ: ಬಾಕಿ ಇರುವ ವೇತನ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿ ನಿಲಯಗಳಲ್ಲಿನ ಹೊರಗುತ್ತಿಗೆ ಅಡುಗೆ ಸಿಬ್ಬಂದಿ ಮಂಗಳವಾರ ಜಿಲ್ಲಾ ಮಾನವ ಹಕ್ಕು ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ನೇತೃತ್ವದಲ್ಲಿ ಇಲ್ಲಿನ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರು.
ಮಕ್ಕಳಿಗೆ ಅಡುಗೆ ತಯಾರಿಸಿ ಉಣಬಡಿಸುತ್ತ ದಿನದ 24 ಗಂಟೆಯೂ ಕೆಲಸ ಮಾಡುವ ನಮಗೆ 1 ವರ್ಷದಿಂದ ಸಂಬಳ ನೀಡಿಲ್ಲ. ಕರೊನಾ ಹಿನ್ನೆಲೆಯಲ್ಲಿ ಇಲ್ಲಿಯವರೆಗೂ ವಸತಿನಿಲಯಗಳು ಪ್ರಾರಂಭವಾಗಿಲ್ಲ, ನಮ್ಮ ಬದುಕು ಮೂರಾಬಟ್ಟೆಯಾಗಿದೆ ಎಂದು ಅಡುಗೆ ಸಿಬ್ಬಂದಿ ಪಾರ್ವತಮ್ಮಾ, ಭಾಗ್ಯಮ್ಮಾ ಅಲವತ್ತುಕೊಂಡರು.
ತಾಲೂಕಿನ ಸಮಾಜಕಲ್ಯಾಣ ಇಲಾಖೆಯ ವಸತಿನಿಲಯಗಳಲ್ಲಿ 59 ಅಡುಗೆ ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, 2019ರ ಆಗಸ್ಟ್‌ನಿಂದ 2020ರ ಮಾರ್ಚ್ ವರೆಗೆ ಸಂಬಳ ನೀಡಿಲ್ಲ. ಸಿಬ್ಬಂದಿ ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದ್ದು ನಿಲಯಪಾಲಕರು ಮತ್ತು ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುಲಾಗುವುದು ಎಂದು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಮಹಿಳಾ ವಿಭಾಗದ ನಿರ್ದೇಶಕಿ ಅನ್ನಪೂರ್ಣ ಎಚ್ಚರಿಸಿದರು.
ಇಲಾಖೆಯಲ್ಲಿನ ಅಡುಗೆ ಸಹಾಯರಿಗೆ 8 ವರ್ಷಗಳಿಂದ ಇಎಫ್ ಮತ್ತು ಪಿಎಫ್ ನೀಡಿಲ್ಲ. ಹೊರಗುತ್ತಿಗೆ ಪಡೆದಿರುವ ಬಾಲಾಜಿ ಮತ್ತು ಜೆಮನಿ ಏಜೆನ್ಸಿಗಳ ವಿರುದ್ಧ ಜಿಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ನಲಗಾನಹಳ್ಳಿ ದುಗ್ಗಪ್ಪ ಒತ್ತಾಯಿಸಿದರು. ಅಡುಗೆ ಸಿಬ್ಬಂದಿಗೆ ಸರ್ಕಾರ ಪ್ರತ್ಯೇಕ ವೇತನ ಬಿಡುಗಡೆ ಮಾಡಬೇಕು, ಇಲ್ಲವೇ ಕನಿಷ್ಠ 3 ತಿಂಗಳಿಗೊಮ್ಮೆ ಯಾದರೂ ವೇತನ ನೀಡಲು ಕ್ರಮ ಜರುಗಿಸಬೇಕೆಂದು ಪ್ರಧಾನ ಕಾರ್ಯದರ್ಶಿ ನಾಗಭೂಷಣ್ ಮನವಿ ಮಾಡಿದರು. ಅಡುಗೆ ಸಿಬ್ಬಂದಿ ಅನಿತಾ, ರಾಮಲಕ್ಷ್ಮಮ್ಮ, ಪದ್ಮಕ್ಕ, ಅಕ್ಕಮ್ಮ, ಸೌಭಾಗ್ಯಮ್ಮ, ಶಿವಮ್ಮ, ಪಾರ್ವತಿ, ನರಸಮ್ಮಾ, ಮಂಜುಳಾ ಇತರರಿದ್ದರು.
ಕೂಲಿ ಕೆಲಸ ಸಿಗುತ್ತಿಲ್ಲ: ವೇತನ ನೀಡುವಂತೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಜೂ.5ರಂದು ಪಾವಗಡಕ್ಕೆ ಬಂದಾಗ ಮನವಿ ಕೊಟ್ಟಿದ್ದೇವು, ಇಲಾಖೆಯ ಆಯುಕ್ತ ಡಾ.ರವಿಕುಮಾರ್ ಸುರಪುರ ಅವರ ಗಮನಕ್ಕೂ ತಂದರೂ ನ್ಯಾಯ ಸಿಕ್ಕಿಲ್ಲ, ಸಂಸಾರಗಳು ಬೀದಿಗೆ ಬಿದ್ದಿದೆ. ಕೂಲಿ ಮಾಡೋಣ ಎಂದರೂ ಕೂಲಿಯೂ ಸಿಗುತ್ತಿಲ್ಲ ಎಂದು ಗಂಗಮ್ಮ, ಪ್ರಮೀಳಮ್ಮ, ಮಂಜುಳಾ ಅಸಹಾಯಕತೆ ವ್ಯಕ್ತಪಡಿಸಿದರು.
ಸರ್ಕಾರ ವಸತಿ ನಿಲಯಗಳ ಅಡುಗೆ ಸಿಬ್ಬಂದಿಗೆ ಪ್ರತ್ಯೇಕ ವೇತನ ಬಿಡುಗಡೆ ಮಾಡಬೇಕಾಗಿದೆ, ಸದ್ಯಕ್ಕೆ 2 ತಿಂಗಳ ವೇತನ ಬಿಡುಗಡೆ ಮಾಡಲಾಗುವುದು. ಶ್ರೀನಿವಾಸನಾಯಕ್ ಸಮಾಜಕಲ್ಯಾಣ ಇಲಾಖೆ ತಾಲೂಕು ಸಹಾಯಕ ನಿರ್ದೆಶಕ