ಚಿಕ್ಕಬಳ್ಳಾಪುರ: ನೀರಿನ ಓವರ್ ಹೆಡ್ ಟ್ಯಾಂಕ್ ನಡಿ ಆಶ್ರಯ ಪಡೆದುಕೊಂಡಿದ್ದ ಕುಟುಂಬದ ದುಸ್ಥಿತಿಯನ್ನು ಕಂಡ ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಸ್ಥಳದಲ್ಲೇ ಮನೆ ಮಂಜೂರು ಮಾಡಿದ್ದಾರೆ.
ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದ ಮಡಿವಾಳ ಲಿಂಗಪ್ಪ ಮನೆ ಕಟ್ಟಿಸಿಕೊಳ್ಳಲು ಚೈತನ್ಯವಿಲ್ಲದಿದ್ದರಿಂದ ಗ್ರಾಮದ ನೀರಿನ ಓವರ್ ಹೆಡ್ ಟ್ಯಾಂಕ್ ಕಂಬಗಳಿಗೆ ತೆಂಗಿನಗರಿಗಳನ್ನು ಹೊದಿಸಿ ವಾಸಕ್ಕೆ ವ್ಯವಸ್ಥೆ ಮಾಡಿಕೊಂಡು ಜೀವಿಸುತ್ತಿದ್ದರು. ತನಗೆ ಮನೆಯಿಲ್ಲದೆ ತಾನು ನಿರಾಶ್ರಿತನಂತೆ ವಾಸ ಮಾಡುತ್ತಿರುವುದನ್ನು ಅಧಿಕಾರಿಗಳಿಗೆ ತಿಳಿಸಿ ಮನೆ ನಿರ್ಮಿಸಿಕೊಡಲು ಪರಿಪರಿಯಾಗಿ ಕೇಳಿಕೊಂಡಿದ್ದರೂ ಪ್ರಯೋಜನವಾಗಿರಲಿಲ್ಲ. ಮಳೆ, ಗಾಳಿಯನ್ನೂ ಲೆಕ್ಕಿಸದೆ ಸೊಳ್ಳೆ ಕಾಟ ತಾಳಿಕೊಂಡು ಬೀದಿ ನಾಯಿಗಳ ಜೊತೆ ಜೊತೆಯಲ್ಲಿ ವಾಸಿಸುತ್ತಿದ್ದರು.
ಇದರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಲಿಂಗಪ್ಪನ ಸ್ಥಿತಿಯನ್ನು ಗಮನಿಸಿ ಬೇಸರ ವ್ಯಕ್ತಪಡಿಸಿದರು. ಆತನ ಬಗ್ಗೆ ಮಾಹಿತಿ ಪಡೆದರು. ಬಳಿಕ ತಾ.ಪಂ ಇಒ ಹೊನ್ನಯ್ಯ ಮತ್ತು ಗ್ರಾ.ಪಂ ಅಧ್ಯಕ್ಷೆ ಗೀತಾ ನಾಗರಾಜರನ್ನು ಸ್ಥಳಕ್ಕೆ ಕರೆಸಿಕೊಂಡು ಲಿಂಗಪ್ಪನಿಗೆ ಸರ್ಕಾರದಿಂದ ಕೂಡಲೇ ಮನೆ ಮಂಜೂರು ಮಾಡಬೇಕು ಎಂದು ಸೂಚಿಸಿದರು. ಮನೆ ಪೂರ್ಣಗೊಳಿಸಲು ಸರ್ಕಾರದ ಅನುದಾನ ಸಾಲದಿದ್ದದಲ್ಲಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಗೀತಾ ನಾಗಪ್ಪ, ಮುಖಂಡರಾದ ಚಂದ್ರಣ್ಣ, ಲಕ್ಷ್ಮಣರಾವ್, ಬೊಮ್ಮಣ್ಣ, ನಾಗರಾಜ್ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.