ತಿಪಟೂರು: ಹಾಲು ಉತ್ಪಾದಕರ ಆರ್ಥಿಕ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಜಾರಿಗೊಂಡಿರುವ ವಿಮಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ತಾಲೂಕು ನಿರ್ದೇಶಕ ಮಾದಿಹಳ್ಳಿ ಪ್ರಕಾಶ್ ಹೇಳಿದರು.
ತಾಲೂಕಿನ ಹೊನ್ನವಳ್ಳಿ ಹೋಬಳಿಯ ಕೆರೆಬಂಡಿಪಾಳ್ಯದಲ್ಲಿ ತುಮಕೂರು ಹಾಲು ಒಕ್ಕೂಟದಿಂದ ಆಯೋಜಿಸಿದ್ದ ವಿಮಾ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಇಂದಿನ ದಿನಗಳಲ್ಲಿ ರೈತರು ಹಾಲು ಉತ್ಪಾದನೆಯಲ್ಲಿ ಹೆಚ್ಚು ತೊಡಗಿದ್ದಾರೆ. ಜಾನುವಾರುಗಳು ಕುಟುಂಬಕ್ಕೆ ಆಧಾರ ಸ್ಥಂಭವಾಗಿವೆ. ಒಂದು ಜಾನುವಾರು ಸತ್ತರೆ ಕುಟುಂಬವೇ ಸಂಕಷ್ಟಕ್ಕೆ ಸಿಲುಕುತ್ತದೆ. ವಿಮೆ ಮಾಡಿಸುವುದರಿಂದ ಪರಿಹಾರ ದೊರೆಯುತ್ತದೆ ಎಂದು ಸಲಹೆ ನೀಡಿದರು.
ಜಾನುವಾರುಗಳು ಆರೋಗ್ಯ ಸಮಸ್ಯೆ, ಅಪಘಾತ ಅಥವಾ ಪ್ರಕೃತಿ ವಿಪತ್ತುಗಳಿಂದ ಸಾಯುವ ಸಂಭವ ಹೆಚ್ಚು. ವಿಮೆಯುಳ್ಳ ರೈತರಿಗೆ ಆರ್ಥಿಕ ನೆರವು ಸಿಗುತ್ತದೆ. ಇದು ಕೇವಲ ಪರಿಹಾರವಲ್ಲ, ರೈತರ ಬದುಕಿಗೆ ಭದ್ರತೆ ನೀಡುವ ರಕ್ಷಾಕವಚ ಎಂದರು.