ಜಿಲ್ಲೆ

ಮಾದಕ ವಸ್ತುಗಳ ಸೇವನೆಯಿಂದ ಜೀವ ಹಾಳು

ಲಕ್ಷ್ಮೇಶ್ವರ: ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ಜೀವ ಕಳೆದುಕೊಳ್ಳುತ್ತಾನೆ. ಅಲ್ಲದೆ, ಆರ್ಥಿಕವಾಗಿ ದಿವಾಳಿ ಕೂಡ ಆಗುತ್ತಾನೆ. ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಸಿಪಿಐ ನಾಗರಾಜ ಮಾಡಳ್ಳಿ ಹೇಳಿದರು.

ಪಟ್ಟಣದ ಬಿಸಿಎನ್ ಸಿರಿ ವಿಜ್ಞಾನ, ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮಾದವ ವಸ್ತುಗಳಿಂದ ಸಮಾಜ ಮುಕ್ತವಾಗಿರಬೇಕು. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ದುಶ್ಚಟಗಳಿಗೆ ಬಲಿಯಾಗದೇ ಆರೋಗ್ಯ ಮತ್ತು ಸಮಯವನ್ನು ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಕೇಂದ್ರೀಕರಿಸಬೇಕು ಎಂದರು. ಮಾದಕ ವಸ್ತುಗಳ ಬಗ್ಗೆ ಯಾವುದೇ ದೂರುಗಳಿದ್ದರೂ ಇಲಾಖೆಗೆ ದೂರು ನೀಡಿ, ಅಂತಹ ಘಟನೆಗಳಿಗೆ ಅವಕಾಶ ನೀಡದೆ ಉತ್ತಮ ನಾಗರಿಕರಾಗಿ ಬದುಕಬೇಕು ಎಂದರು.

ಸಂಸ್ಥೆಯ ನಿರ್ದೇಶಕ ನಾಗರಾಜ ಕುಲಕರ್ಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಮತ್ತು ಪಾಶ್ಚಿಮಾತ್ಯ ಪದ್ದತಿ ಅನುಕರಣೆ ಆಕರ್ಷಣೆಗೆ ಒಳಗಾಗಿ ಯುವ ಸಮೂಹ ದಾರಿ ತಪ್ಪುತ್ತಿದೆ. ಕುಡಿತ, ಗುಟ್ಖಾ, ಗಾಂಜಾ, ಅಫೀಮು ಮತ್ತು ಕೆಲ ಮತ್ತು ತರಿಸುವ ಮಾತ್ರೆಗಳು ಇತ್ಯಾದಿಗಳ ಅಭ್ಯಾಸದಿಂದ ಸಮಾಜದಲ್ಲಿ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ. ಇದರಿಂದ ಅವರ ಜೀವನ ಹಾಳು ಮಾಡಿಕೊಳ್ಳುವುದರ ಜೊತೆಗೆ ಕುಟುಂಬವನ್ನು ಬೀದಿಗೆ ತರುವ ಘಟನೆಗಳು ನಡೆಯುತ್ತಿವೆ. ಅದಕ್ಕಾಗಿ ಸಾಧ್ಯವಾದಷ್ಟು ಮಾದಕ ವ್ಯಸನಿಗಳ ಮನಸು ಪರಿವರ್ತನೆ ಮಾಡುವ ಕಾರ್ಯವನ್ನು ಮಾಡಬೇಕು ಎಂದರು.

ಪಿಎಸ್​ಐ ಈರಪ್ಪ ರಿತ್ತಿ ಮಾತನಾಡಿದರು. ಉಪನ್ಯಾಸಕ ಮಂಜುನಾಥ ಬಂಡಿವಾಡ ಕಾರ್ಯಕ್ರಮ ನಿರ್ವಹಿಸಿದರು.