ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬೆಂಗಳೂರಿನ ನಾರಾಯಣ ಹೆಲ್ತ್ ಆಸ್ಪತ್ರೆಯಲ್ಲಿ ಏಳು ತಿಂಗಳ ಹೆಣ್ಞು ಮಗುವಿಗೆ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆ ಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಅಸ್ಪತ್ರೆಯ ಯಕೃತ್ತಿನ ಶಸ್ತ್ರಚಿಕಿತ್ಸಕ ಡಾ. ರಾಘವೇಂದ್ರ ಸಿ.ವಿ. ತಿಳಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆ ಇಳಕಲ್ನ ಹೆಣ್ಣು ಮಗುವಿಗೆ ಹುಟ್ಟಿದ ಒಂದೂವರೆ ತಿಂಗಳಲ್ಲಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಪ್ರಾಥಮಿಕವಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಬೆಂಗಳೂರಿನ ನಮ್ಮ ಆಸ್ಪತ್ರೆಗೆ ಬಂದಿದ್ದರು. ನಾವು ಪರೀಕ್ಷೆ ಮಾಡಿದ ಬಳಿಕ ಮಗುವಿಗೆ ಜನ್ಮಜಾತ ಪಿತ್ತಜನಕಾಂಗ (ಯಕೃತ್ತು)ದ ಬಿಲಿಯರಿ ಅಟ್ರೇಸಿಯಾ ಇರುವುದು ಗೊತ್ತಾಯಿತು ಎಂದು ಹೇಳಿದರು.
ಹುಟ್ಟುವಾಗ ಮಗುವಿನ ಪಿತ್ತ ನಾಳಗಳ ಬೆಳವಣಿಗೆ ಆಗದೇ ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಪಿತ್ತರಸ ಹೊರಗೆ ಹೋಗಲು ದಾರಿ ಇರುವುದಿಲ್ಲ. ಇದರಿಂದ ಪಿತ್ತರಸ ಯಕೃತ್ತಿನಲ್ಲಿಯೇ ಸಂಗ್ರಹವಾಗಿ ಯಕೃತ್ತು ಡ್ಯಾಮೇಜ್ ಆಗುವ ಸಾಧ್ಯತೆಗಳಿರುತ್ತದೆ. ಈ ರೀತಿಯ ಸಮಸ್ಯೆ 25 ಸಾವಿರ ಜನರಲ್ಲಿ ಒಬ್ಬರಿಗೆ ಕಂಡು ಬರುತ್ತದೆ ಎಂದು ತಿಳಿಸಿದರು.
ಮಗುವಿನ ತಂದೆಯ ಶೇ. 20ರಷ್ಟು ಲೀವರ್ (ಯಕೃತ್ತು) ತೆಗೆದು ಮಗುವಿಗೆ ಕಸಿ ಮಾಡಲಾಗಿದೆ. 12 ತಾಸು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇಂಥ ಶಸ್ತ್ರಚಿಕಿತ್ಸೆಗಳಿಗೆ 20ರಿಂದ 25 ಲಕ್ಷ ರೂ. ವೆಚ್ಚ ಬರುತ್ತದೆ. ಮಗುವಿನ ತಂದೆ ಬಿಪಿಎಲ್ ಕಾರ್ಡ್ ಹೊಂದಿದ್ದರಿಂದ ಸರ್ಕಾರಿ ಯೋಜನೆಯಡಿ 11 ಲಕ್ಷ ರೂ., ದಾನಿಗಳಿಂದ 5.5 ಲಕ್ಷ ರೂ. ಹಾಗೂ ಕುಟುಂಬದವರು 2-3 ಲಕ್ಷ ರೂ. ಹೊಂದಿಸಿದ್ದಾರೆ ಎಂದು ಹೇಳಿದರು.