ಕಡೂರಿನ ಮಲ್ಲೇಶ್ವರದ ಚಕ್ರವರ್ತಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯವಲೋಕನ ಕಾರ್ಯಕ್ರಮದಲ್ಲಿ ಚಿಂತಕ ಸಿಗೇಹಡ್ಲು ಹರೀಶ್ ಮಾತನಾಡಿದರು.ಕೆ.ಪಿ.ರಾಘವೇಂದ್ರ, ಸೂರಿಶ್ರೀನಿವಾಸ್, ಯರದಕೆರೆ ರಾಜಪ್ಪ ಮತ್ತಿತರಿದ್ದರು. 
ಜಿಲ್ಲೆ

ಬೇಂದ್ರೆ ಬದುಕು, ಬರಹ ಸಾರ್ವಕಾಲೀಕ

ಜಿ.ಹೆಚ್. ಧನ್ಯಕುಮಾರ್

ಕಡೂರು: ಭಾಷಾ ಸೊಗಡನ್ನು ಕಾವ್ಯಕ್ಕೆ ತಂದ ಅಪ್ಪಟ ದೇಸಿ ಕವಿ ದ.ರಾ.ಬೇಂದ್ರೆ. ಸಾಹಿತ್ಯ ಬದುಕಿಗೆ ಬೇಂದ್ರೆ ಕಾವ್ಯ ಆದರ್ಶ ಎಂದು ಚಿಂತಕ ಸಿಗೇಹಡ್ಲು ಹರೀಶ್ ಹೇಳಿದರು.
ತಾಲೂಕಿನ ಮಲ್ಲೇಶ್ವರದ ಚಕ್ರವರ್ತಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಕೇಂದ್ರ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ದ.ರಾ.ಬೇಂದ್ರೆ ಸಾಹಿತ್ಯವಲೋಕನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೇಂದ್ರೆ ಅವರ ಬದುಕು, ಬರಹ ಸಾರ್ವಕಾಲೀಕ. ಸರಳ ಜೀವನಕ್ಕೆ ಹೆಸರಾದ ಬೇಂದ್ರೆ ಅವರ ಚಿಂತನೆ ನಮ್ಮ ಬದುಕಲ್ಲಿ ಅಳವಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆ ತಮ್ಮ ವ್ಯಾಸಂಗದ ಬದುಕಿನಲ್ಲಿ ಅಧ್ಯಯನಶೀಲರಾಗಬೇಕಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ರಾಘವೇಂದ್ರ ಉಪನ್ಯಾಸ ನೀಡಿ, ನವೋದಯ ಕಾವ್ಯದ ಹಳೆ ತಲೆಮಾರಿನ ಅಪರೂಪದ ಪ್ರತಿಭೆ ದ.ರಾ.ಬೇಂದ್ರೆ. ಕನ್ನಡ ಸಾಹಿತ್ಯಕ್ಕೆ ಅಂತರಾಷ್ಟ್ರೀಯ ಖ್ಯಾತಿ ತಂದು ಕೊಟ್ಟವರಲ್ಲಿ ಬೇಂದ್ರೆ ಮೊದಲಿಗರು. ನಾಕುತಂತಿ ಕವನ ಸಂಕಲನದ ಮೂಲಕ ಕನ್ನಡ ಸಾಹಿತ್ಯಕ್ಕೆ ಎರಡನೇ ಬಾರಿ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟು ಕನ್ನಡ ಸಾಹಿತ್ಯದ ಕೀರ್ತಿಯನ್ನು ಹೆಚ್ಚಿಸಿದ ವಿಶೇಷ ಕವಿ. ಕಾವ್ಯದಲ್ಲಿ ಬಳಸಿದ ದೇಸಿ ಪದಗಳಿಂದ ಇವರಿಗೆ ಗಾರುಡಿಗ, ಮಾಂತ್ರಿಕ ಕವಿ ಎಂಬ ಬಿರುದು ತಂದುಕೊಟ್ಟಿತು ಎಂದು ಬಣ್ಣಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಯರದಕೆರೆ ರಾಜಪ್ಪ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನಾರ್ಜನೆ ಹೆಚ್ಚಿಸಿಕೊಂಡಾಗ ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ವಿದ್ಯಾಭ್ಯಾಸ ಕೇವಲ ಅಂಕಗಳಿಕೆಗೆ ಮಾತ್ರ ಸೀಮಿತವಾಗಬಾರದು. ಬದಲಾಗಿ ನಮ್ಮ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಕಲೆ, ಸಾಹಿತ್ಯ, ಕ್ರೀಡೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು.