ಶಿಗ್ಗಾಂವಿ: ವೀರಶೈವರು ಲಿಂಗದೀಕ್ಷೆ ಪಡೆದು, ನಿತ್ಯ ಲಿಂಗಪೂಜೆ ಮಾಡಿಕೊಳ್ಳುವುದರಿಂದ ಬದುಕು ಹಸನಾಗುವುದು ಎಂದು ಶ್ರೀ ಕ್ಷೇತ್ರ ಕಾಶಿ ಜಂಗಮವಾಡಿ ನೂತನ ಜಗದ್ಗುರು ಶ್ರೀ ಚನ್ನಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.
ತಾಲೂಕಿನ ಕನಕದಾಸರ ಬಾಡ ಗ್ರಾಮದ ಶ್ರೀ ಅನ್ನದಾನೇಶ್ವರ ಸ್ವಾಮಿ ಗದ್ದುಗೆ ಜೀಣೋದ್ಧಾರ ಹಾಗೂ ಪ್ರಾಣ ಪ್ರತಿಷ್ಠಾಪನಾ ಮತ್ತು ಶ್ರೀ ಉಜ್ಜಯಿನಿ, ಶ್ರೀಶೈಲ ಹಾಗೂ ಶ್ರೀ ಕಾಶಿ ಉಭಯ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಅಯ್ಯಾಚಾರ, ಸಾಮೂಹಿಕ ಶಿವದೀಕ್ಷಾ ಕಾರ್ಯಕ್ರಮದ ಅಂಗವಾಗಿ ಗುರುವಾರ ಆಯೋಜಿಸಿದ್ದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಜಂಗಮರಿಗೆ ಲಿಂಗದೀಕ್ಷೆ ಎನ್ನುವುದು ಪ್ರಥಮ ಮದುವೆಯಾದಂತೆ. ಲಿಂಗದೀಕ್ಷೆ ಪಡೆದ ವಟುಗಳು ಗುರುವಿನ ಮಾರ್ಗದರ್ಶನದ ಮೇರೆಗೆ ನಿತ್ಯ ಲಿಂಗಪೂಜೆಯ ಮೂಲಕ ಸಂಸ್ಕಾರಯುತ ಜೀವನ ನಡೆಸಬೇಕು. ಶಿವದೀಕ್ಷೆ, ಲಿಂಗದೀಕ್ಷೆ ಪಡೆದ ಜಂಗಮವಟುಗಳು ಲೋಕಕಲ್ಯಾಣಕ್ಕಾಗಿ ಧರ್ಮ ಜಾಗೃತಿಯ ಸಂದೇಶವನ್ನು ನಾಡಿಗೆ ಸಾರಲು ಮುಂದಾಗಬೇಕು. ವೀರಶೈವ ಧರ್ಮದ ಪ್ರಾಚೀನತೆ ಬಗ್ಗೆ ನೂರಾರು ಶಾಸನಗಳಲ್ಲಿ ಹಾಗೂ ಹಲವಾರು ಶರಣರ ವಚನಗಳಲ್ಲಿ ಉಲ್ಲೇಖವಿದೆ. ಈ ಬಗ್ಗೆ ಸಮಾಜದಲ್ಲಿ ಕೆಲವರಿಂದ ಗೊಂದಲ ಮೂಡಿಸುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ವೀರಶೈವ ಧರ್ಮ ತನ್ನದೇ ಆದ ಮಹತ್ವ ಹೊಂದಿದೆ ಎಂದರು.
ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ಮಹಾತ್ಮರು ನಡೆದಾಡಿದ ನೆಲ ಪಾವನ ಎನ್ನುವುದಕ್ಕೆ ಬಾಡ ಗ್ರಾಮ ಸಾಕ್ಷಿಯಾಗಿದೆ. ದಾಸ ಸಾಹಿತ್ಯ ರಚಿಸಿದವರಲ್ಲಿ ಕನಕದಾಸರು ಪ್ರಮುಖರಾಗಿದ್ದಾರೆ ಎಂದರು.
ಶ್ರದ್ಧೆ, ನಿಷ್ಠೆ, ಛಲದಿಂದ ಸಾಧನೆಗೆ ಮುಂದಾದರೆ ಯಶಸ್ಸು ತಾನಾಗಿಯೇ ಒಲಿದು ಬರಲಿದೆ. ಜೀವನ ಯಶಸ್ಸಿಗೆ ಸದಾ ಕಾಲ ಧರ್ವಚರಣೆ, ಲಿಂಗಪೂಜೆ ಬಹಳ ಮುಖ್ಯ. ಲಿಂಗದೀಕ್ಷೆ ಮೋಕ್ಷದ ದಾರಿದೀಪವಾಗಿದೆ. ಅದಕ್ಕಾಗಿ ಕೇವಲ ಲಿಂಗಾಯತರಲ್ಲದೆ ಅನ್ಯ ಧರ್ವಿುಯರೂ ಲಿಂಗದೀಕ್ಷೆ ಪಡೆದುಕೊಳ್ಳುವ ಮೂಲಕ ಧರ್ಮ ಜಾಗೃತಿ ಕೆಲಸ ಮಾಡಬೇಕು ಎಂದರು.
ಕಾಶಿ ಜಂಗಮವಾಡಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ, ಕನಕದಾಸರು, ಅನ್ನದಾನೇಶ್ವರ ಜನನದಿಂದ ಬಾಡ ಗ್ರಾಮ ಪವಿತ್ರ ಕ್ಷೇತ್ರವಾಗಿದೆ ಎಂದರು.
ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಹಿರೇಮಣಕಟ್ಟಿ ಶ್ರೀ ವಿಶ್ವರಾಧ್ಯ ಶಿವಾಚಾರ್ಯರು, ಹಿರೇಬೆಂಡಿಗೇರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಧರ್ಮದರ್ಶಿಗಳಾದ ವಿ.ಸಿ. ಪಾಟೀಲ ಪಾಲ್ಗೊಂಡಿದ್ದರು. ಬೆಳಗ್ಗೆ ಅನ್ನದಾನೇಶ್ವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಸಾಮೂಹಿಕ ಅಯ್ಯಾಚಾರ, ಶಿವದೀಕ್ಷೆ ಸೇರಿದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮ ಜರುಗಿದವು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ದಂಪತಿ ಉಭಯ ಶ್ರೀಗಳ ಆಶೀರ್ವಾದ ಪಡೆದುಕೊಂಡರು.