ಸಿದ್ದಾಪುರ: ಇಲ್ಲಿನ ಕರಡಿಗೋಡು ರಸ್ತೆಯಲ್ಲಿರುವ ಲಿಟಲ್‌ವುಡ್ ಮಾಂಟೆಸ್ಸರಿ ಶಾಲೆಯ ಶೈಕ್ಷಣಿಕ ಪ್ರಾರಂಭೋತ್ಸವ ಕಾರ್ಯಕ್ರಮ ಶುಕ್ರವಾರ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ಮಾಂಟೆಸ್ಸರಿ ಯುನೈಟೆಡ್‌ನ ಸಂಸ್ಥಾಪಕಿ ಶ್ರೀಮತಿ ಮುನಿರಾ ಅಕ್ತರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಾಲಕರು ಮಕ್ಕಳ ಭವಿಷ್ಯವನ್ನು ರೂಪಿಸಲು ಮುಂದಾಗುವುದರ ಮೂಲಕ ಕಲಿಕೆಗೆ ಪ್ರೋತ್ಸಾಹ ನೀಡಿ ಪ್ರತಿಭಾನ್ವಿತರಾಗಿ ಶಿಕ್ಷಣದ ಮೂಲಕ ಮುಂದೆ ತರಬೇಕೆಂದು ಹೇಳಿದ ಅವರು, ಬಾಲ್ಯದಿಂದಲೇ ಮಕ್ಕಳು ಶಿಕ್ಷಣಭ್ಯಾಸದ ಮೂಲಕ ಕಲಿಕೆಯಲ್ಲಿ ತೊಡಗಿಸಿಕೊಂಡು ಮುನ್ನಡೆದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಶಾಲಾ ಮುಖ್ಯಶಿಕ್ಷಕಿ ಸುಧಾ ಉತ್ತಪ್ಪ ಮಾತನಾಡಿ, ಬಾಲ್ಯದಿಂದಲೇ ಮಕ್ಕಳ ಚಿಂತನೆಯನ್ನು ಗಮನದಲ್ಲಿಟ್ಟುಕೊಂಡು ಕಲಿಕೆಗೆ ಹೆಚ್ಚಿನ ಆಸಕ್ತಿ ತೋರುವ ಮೂಲಕ ಶುಚಿತ್ವ, ಪರಿಸರ, ಸಾಮಾಜಿಕ ನೃತ್ಯ, ಭಾಷಣ, ಯೋಗ, ಹಾಡು ಸಂಗೀತ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರೊಂದಿಗೆ ಅಂಚೆ ಕಚೇರಿ, ಪೊಲೀಸ್ ಠಾಣೆ, ಬ್ಯಾಂಕ್ ವ್ಯವಹಾರ, ಕೃಷಿ, ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಮಕ್ಕಳನ್ನ ಆಯಾ ಸ್ಥಳಗಳಿಗೆ ಕರೆದೊಯ್ದು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು. ಪ್ರಮುಖರಾದ ಇಬ್ರಾಹಿಂ ಅಕ್ತರ್, ಶಿಕ್ಷಕಿಯರಾದ ಮಲ್ಲಿಕಾ, ಸೌಮ್ಯಾ, ಜೋಶ್ನಾ, ದೀಪಿಕಾ, ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.