ಕುಮಟಾ : ಹೊನ್ನಾವರದಿಂದ ಹಸಿಕಸ ಸಹಿತ ಇತರ ಕಸ-ತ್ಯಾಜ್ಯಗಳನ್ನು ಸರಕು ವಾಹನದಲ್ಲಿ ತಂದು ತಾಲೂಕಿನ ದೀವಗಿ ಪಂಚಾಯಿತಿ ವ್ಯಾಪ್ತಿಯ ಮಣಕಿ-ಮಾನೀರ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥದ ಅಂಚಿಗೆ ಸುರಿಯುತ್ತಿದ್ದವರನ್ನು ಹಿಡಿದ ಯುವಾ ಬ್ರಿಗೇಡ್ ತಂಡದವರು ಸ್ಥಳೀಯ ಪಂಚಾಯಿತಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.
ಹೊನ್ನಾವರದಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ವಾಹನದಲ್ಲಿ ಯಾರೋ ತುಂಬಿ ಕಳುಹಿಸಿದ ದೊಡ್ಡ ಪ್ರಮಾಣದ ಕಸವನ್ನು ಮಾನೀರ ಬಳಿ ಚೆಲ್ಲುತ್ತಿದ್ದನ್ನು ಕಂಡ ಯುವಾ ಬ್ರಿಗೇಡ್ ಮಹಾರಕ್ಷಕ ಪ್ರಕಲ್ಪದ ರಾಜ್ಯ ಸಹಸಂಚಾಲಕ ರಾಮದಾಸ ನಾಯ್ಕ ಹಳದಿಪುರ ಅವರು ಕಸ ಎಸೆಯುವದನ್ನು ತಡೆದು ಕುಮಟಾ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರು. ಆದರೆ ಕಸ ಚೆಲ್ಲುತ್ತಿದ್ದ ಸ್ಥಳ ಪುರಸಭಾ ವ್ಯಾಪ್ತಿಗೆ ಒಳಪಡದೇ ದಿವಗಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದರಿಂದ ಬಳಿಕ ದಿವಗಿ ಗ್ರಾಮಪಂಚಾಯಿತಿ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಮಾಹಿತಿ ನೀಡಿದರು. ಜತೆಗೆ 112 ಗೆ ಕರೆ ಮಾಡಿದ್ದರಿಂದ ಪೊಲೀಸರು ಕೂಡಾ ಸ್ಥಳಕ್ಕೆ ಬಂದರು.
ಸ್ಥಳಕ್ಕೆ ಬಂದ ದಿವಗಿ ಪಂಚಾಯಿತಿ ಅಧ್ಯಕ್ಷ ಜಗದೀಶ ಭಟ್ಟ, ಸದಸ್ಯರಾದ ಶ್ರೀಧರ ಗೌಡ, ಶಿವಾನಂದ ಅಂಬಿಗ, ಪಿಡಿಒ ವಿನಾಯಕ ಮೋರೆ ಇನ್ನಿತರರು ಪೊಲೀಸರ ಸಹಾಯದಿಂದ ಕಸ ಚೆಲ್ಲಿದ ವಾಹನದವರಿಂದಲೇ ಎಲ್ಲ ಕಸವನ್ನೂ ಮರಳಿ ವಾಹನಕ್ಕೆ ತುಂಬಿಸಿದರು. ಸುತ್ತಮುತ್ತ ಬಿದ್ದಿದ್ದ ಕಸವನ್ನೂ ಸ್ವಚ್ಛಗೊಳಿಸಿದರು. ಬಳಿಕ ದಿವಗಿ ಪಂಚಾಯಿತಿ ಕಾರ್ಯಾಲಯಕ್ಕೆ ಕರೆದೊಯ್ದು 500 ರೂ ದಂಡ ವಿಧಿಸಿ ಬಿಡಲಾಯಿತು. ಯುವಾ ಬ್ರಿಗೇಡ್ ಸದಸ್ಯ ಅಣ್ಣಪ್ಪ ನಾಯ್ಕ ಇನ್ನಿತರರು ಇದ್ದರು