ಗೋಕಾಕ: ಜನರು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಸಾಹಿತಿಗಳನ್ನು ಪ್ರೋತ್ಸಾಹಿಸುವಂತೆ ಸಾಹಿತಿ ಪ್ರೊ.ಚಂದ್ರಶೇಖರ ಅಕ್ಕಿ ಹೇಳಿದರು.
ನಗರದ ಸಮುದಾಯ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ಬೆಳ್ಳಿ ಮಹೋತ್ಸವದ ಸಂಭ್ರಮದ ನಿಮಿತ್ತ ಗೋಕಾವಿ ಗೆಳೆಯರ ಬಳಗದ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಹಿರಿಯ ಕಾದಂಬರಿಕಾರ ಎಸ್.ಆರ್. ನೆಲವಡೆ ಅವರ ಮೂರನೇ ಕೃತಿ ಬೆಟ್ಟದ ಬೇಟೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಾಹಿತಿಗಳನ್ನು ಪ್ರೋತ್ಸಾಹಿಸಿದರೆ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳ್ಳುತ್ತದೆ. ಹಲವಾರು ಮಹಾನ್ ಸಾಹಿತಿಗಳನ್ನು ನಾಡಿಗೆ ನೀಡಿದ ಗೋಕಾವಿ ನಾಡು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತನ್ನದೆಯಾದ ಸ್ಥಾನ ಪಡೆದಿದೆ ಎಂದರು.
ಕೃತಿ ಬಿಡುಗಡೆಗೊಳಿಸಿದ ಸಾಹಿತಿ ಡಾ.ಸಿ.ಕೆ. ನಾವಲಗಿ ಮಾತನಾಡಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದವರನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಜಯಾನಂದ ಮಾದರ ಪುಸ್ತಕ ಪರಿಚಯ ಮಾಡಿದರು. ಸಾಹಿತಿ ಅಶೋಕ ಬಾಬು ನೀಲಗಾರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಸಾಹಿತಿಗಳಾದ ಡಾ.ಲಕ್ಷ್ಮಣ ಚೌರಿ, ಶಕುಂತಲಾ ದಂಡಗಿ, ಪ್ರಕಾಶ ಕೋಟಿನತೋಟ, ಲೇಖಕ ಎಸ್.ಆರ್.ನೆಲವಡೆ ಉಪಸ್ಥಿತರಿದ್ದರು. ವಿದ್ಯಾ ರೆಡ್ಡಿ ಸ್ವಾಗತಿಸಿದರು. ಆನಂದ ಸೊರಗಾಂವಿ ನಿರೂಪಿಸಿದರು. ಈಶ್ವರಚಂದ್ರ ಬೆಟಗೇರಿ ವಂದಿಸಿದರು.