ಕಾರವಾರ Literature program: ಉತ್ತಮ ಜೀವನಕ್ಕೆ ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಜ್ಞಾನ ಸಾಲದು. ಸಾಮಾನ್ಯ ಜ್ಞಾನ, ಸಾಹಿತ್ಯಕ ಜ್ಞಾನ, ಸಮಾಜ ಜ್ಞಾನದ ಅಗತ್ಯ ಇದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಹೇಳಿದರು.
ಕಸಾಪ ಕಾರವಾರ ತಾಲೂಕು ಘಟಕದಿಂದ ಕನ್ನಡ ಕಾರ್ತಿಕ ಕಾರ್ಯಕ್ರಮ ಸರಣಿಯ ಭಾಗವಾಗಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿ. ಪಿ. ನಾಯ್ಕ ಅವರ ಮೇದಿನಿ ಕವನ ಸಂಕಲನದ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಸಾಹಿತ್ಯ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸಬೇಕು. ಸಾಹಿತ್ಯ ಕೃತಿಗಳನ್ನು ಓದಬೇಕು ಎಂದರು.
Literature program ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಾಹಿತಿ, ಕಾರವಾರ ತಾಲೂಕಾ 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಪ್ರೇಮಾ ಟಿ.ಎಮ್.ಆರ್., ಕಾರವಾರದ ಮಣ್ಣಿನಲ್ಲಿ ಸಾಹಿತ್ಯದ ಸಾರವಿದೆ. ಕಾರವಾರದ ಪರಿಸರದಲ್ಲಿ ಸಾಹಿತ್ಯಕ ಪ್ರೇರಣೆ ಇದೆ. ಕಾರವಾರದಲ್ಲೇ ಬರವಣಿಗೆ ಆರಂಭಿಸಿದ ರವೀಂದ್ರನಾಥ ಠಾಗೋರ ನೊಬೆಲ್ ಪ್ರಶಸ್ತಿ ಪಡೆದಿರುವುದು, ಕಾರವಾರದ ಮಣ್ಣಿನ ಮಗ ಮಹಾಬಲೇಶ್ವರ ಸೈಲ್ ಸರಸ್ವತಿ ಸನ್ಮಾನಕ್ಕೆ ಬಾಜನರಾಗಿರುವುದನ್ನು ಉದಾಹರಿಸುತ್ತೇನೆ ಎಂದರು.
ಕಾಲೇಜಿನ ಉಪಪ್ರಾಂಶುಪಾಲೆ ಕಲ್ಪನಾ ಗಾಂವಕರ, ವಿ. ಪಿ. ನಾಯ್ಕರು ನಿವೃತ್ತಿ ನಂತರದ ವಿಶ್ರಾಂತಿ ಸಮಯವನ್ನು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಸದುಪಯೋಗಪಡಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಕವಿ ವಿ ಪಿ. ನಾಯ್ಕರನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾರವಾರ ತಾಲೂಕಾ ಘಟಕದಿಂದ ಸನ್ಮಾನಿಸಲಾಯಿತು. ಕ.ಸಾಪ. ತಾಲೂಕಾ ಅಧ್ಯಕ್ಷ ರಾಮಾ ನಾಯ್ಕ ಸ್ವಾಗತಿಸಿದರು. ವಿದ್ಯಾ ನಾಯ್ಕ ಸಂಗಡಿಗರು ನಾಡಗೀತೆ ಹಾಡಿದರು. ಶಿವಾನಂದ ತಾಂಡೇಲ ಕಾರ್ಯಕ್ರಮ ನಿರ್ವಹಿಸಿದರು. ಬಾಬು ಶೇಖ ವಂದಿಸಿದರು.