ಮಂಜೇಶ್ವರ: ಕಾಸರಗೋಡಿನಲ್ಲಿ ಜನಿಸಿ, ಇಲ್ಲಿಯೇ ಕಲಿಕೆ ಪೂರ್ಣಗೊಳಿಸಿ ಅಧ್ಯಾಪಕರಾಗಿ ದುಡಿದಿದ್ದ ದಿ.ಕೆಟಿ.ಗಟ್ಟಿಯವರು ಕಾಸರಗೋಡಿನ ಹೆಮ್ಮೆಯ ಸಾಹಿತಿ ಎಂದು ಕಾಸರಗೋಡು ಸರ್ಕಾರಿ ಕಾಲೇಜು ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಚಿಂತನ ಕಾರ್ಯಕ್ರಮದ ಭಾಗವಾಗಿ ಮಂಜೇಶ್ವರದ ಮಹಾಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯದ ನೇತೃತ್ವದಲ್ಲಿ ಭಾನುವಾರ ನಡೆದ ಕೆ.ಟಿ.ಗಟ್ಟಿ ಬದುಕು-ಬರಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ ವ್ಯವಸ್ಥೆ ವಿರುದ್ಧ ಸಾಹಿತ್ಯದ ಮೂಲಕ ಬಂಡೆದ್ದ ಕೆ.ಟಿ.ಗಟ್ಟಿ ಸಾಹಿತ್ಯದ ಎಲ್ಲಾ ಪ್ರಾಕಾರಗಳಲ್ಲೂ ಕೈಯಾಡಿಸಿದವರೆಂದು ತಿಳಿಸಿದರು.
ಗ್ರಂಥಾಲಯ ಸಮಿತಿ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಜೀನ್ ಲವೀನೊ ಮೊಂತೇರೊ ಉದ್ಘಾಟಿಸಿದರು. ಸಮುದಾಯ ಮಂಗಳೂರಿನ ವಾಸುದೇವ ಉಚ್ಚಿಲ್, ಕೇರಳ ಲೈಬ್ರರಿ ಕೌನ್ಸಿಲ್ ರಾಜ್ಯ ಸಮಿತಿ ಸದಸ್ಯ ಅಹಮ್ಮದ್ ಹುಸೈನ್ ಮಾಸ್ತರ್ ಶುಭಹಾರೈಸಿದರು. ಗ್ರಂಥಾಲಯ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು.