ಮೊದಲಘಟ್ಟ ಮುರಾರ್ಜಿ ವಸತಿ ಶಾಲೆಯಲ್ಲಿ ಕಸಾಪ ತಾಲೂಕು ಘಟಕ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪುರ ಕಟ್ಟೆಮನೆ ಮಠದ ಧರ್ಮದರ್ಶಿ ಪಿ.ಕೆ.ಎಂ.ವಿಶ್ವಾನಂದಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಟಿ.ಪಿ.ವೀರೇಂದ್ರ, ನಿವೃತ್ತ ಪ್ರಾಚಾರ್ಯ ಡಾ.ಕೆ.ರುದ್ರಪ್ಪ, ಉಪನ್ಯಾಸಕರಾದ ಪಿ.ಎಂ.ಬಸವಲಿಂಗಯ್ಯ, ಪ್ರಭು ಸೊಪ್ಪಿನ ಹಾಗೂ ಇತರರಿದ್ದರು. 
ಜಿಲ್ಲೆ

ಸಾಹಿತ್ಯ ಕೃಷಿ ಜೀವನಾನುಭವದ ಅಭಿವ್ಯಕ್ತಿ

ರುದ್ರಪ್ಪ ವಾಲಿ

ಹೂವಿನಹಡಗಲಿ: ಮಗುವಿನ ಸರ್ವಾಂಗೀಣ ವಿಕಾಸದ ಜತೆಗೆ ಮಾನವೀಯ ಗುಣಗಳನ್ನು ರೂಢಿಸಿಕೊಳ್ಳುವಂತಹ ವಾತಾವರಣ ಪಾಲಕರು, ಶಿಕ್ಷಕರು ನಿರ್ಮಾಣ ಮಾಡಬೇಕಿದೆ ಎಂದು ಉಪನ್ಯಾಸಕ ಪಿ.ಎಂ.ಬಸವಲಿಂಗಯ್ಯ ಹೇಳಿದರು.

ತಾಲೂಕಿನ ಮೊದಲಘಟ್ಟ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಸಾಪದಿಂದ ಶುಕ್ರವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೃಷಿ, ಸಾಹಿತ್ಯ ಮತ್ತು ಕೌಟುಂಬಿಕ ಸಂಬಂಧ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ಈ ನಾಡಿನ ಬಹುಪಾಲು ಜನರ ಮೂಲ ಕಸುಬು ಕೃಷಿಯಾಗಿದ್ದು, ಜೀವನಾನುಭವದ ಅಭಿವ್ಯಕ್ತಿ ಸಾಹಿತ್ಯವಾಗಿದೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಶಿಷ್ಟ ಮತ್ತು ಜನಪದ ಸಾಹಿತ್ಯ ಜೀವನದ ಮಹತ್ವ ತಿಳಿಸುತ್ತದೆ. ಜನಪದರು ಕಟ್ಟಿಕೊಟ್ಟ ಸಮಾಜದಲ್ಲಿ ನಾವೆಲ್ಲರೂ ಜೀವಿಸುತ್ತಿದ್ದೇವೆ. ಮಕ್ಕಳಿಗೆ ಎಲ್ಲರ ಸಂಬಂಧಗಳನ್ನು ಹೆಚ್ಚಿಸಿಕೊಳ್ಳುವಂತಹ ವಾತಾವರಣವನ್ನು ನಾವು ಸೃಷ್ಟಿಸಬೇಕಿದೆ. ಜನಪದರು ತ್ರಿಪದಿಗಳನ್ನು ಹಾಡುವ ಮೂಲಕ ಜನರಲ್ಲಿ ಜೀವನ ಪ್ರೀತಿ ಹೆಚ್ಚಿಸುತ್ತಿದ್ದರು ಎಂದರು.

ಸರ್ವಜ್ಞನ ವಚನಗಳಲ್ಲಿನ ಮೌಲ್ಯಗಳ ಕುರಿತು ಉಪನ್ಯಾಸಕ ಸೊಪ್ಪಿನ ಪ್ರಭು ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಡಾ.ಕೆ.ರುದ್ರಪ್ಪ, ಶಾಲೆಯ ಪ್ರಾಚಾರ್ಯ ಜಿ.ಹಂಪಮ್ಮ, ಕಸಾಪ ತಾಲೂಕು ಅಧ್ಯಕ್ಷ ಟಿ.ಪಿ.ವೀರೇಂದ್ರ, ದತ್ತಿದಾನಿ ಗಡ್ಡಿ ಗುಡ್ಡಪ್ಪ, ಕಸಾಪ ಗೌರವ ಕಾರ್ಯದರ್ಶಿ ಎ.ಎಂ.ಚನ್ನವೀರಸ್ವಾಮಿ, ಶಿಕ್ಷಕರಾದ ಸಿ.ಎಚ್.ಎಂ.ಚೇತನ್, ಎಸ್.ಅಂದಪ್ಪ, ಬಿ.ಚಂದ್ರಶೇಖರ ಇತರರಿದ್ದರು.