ಜಿಲ್ಲೆ

ಮಂಡ್ಯಕ್ಕೆ ಪ್ರತ್ಯೇಕ ಗೋಷ್ಠಿ ಮೀಸಲಾಗಲಿ: ಸಮಾಲೋಚನಾ ಸಭೆಯಲ್ಲಿ ಸಾಹಿತಿಗಳ ಸಲಹೆ

ಮಂಡ್ಯ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿಗಳೊಂದಿಗೆ ನಗರದ ಹೊರವಲಯದ ಅಮರಾವತಿ ಹೋಟೆಲ್ ಸಭಾಂಗಣದಲ್ಲಿ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಾಹಿತಿಗಳು ತಮ್ಮ ಸಲಹೆ ಹಂಚಿಕೊಂಡರು. ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ಮಂಡ್ಯ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ. ಸಮ್ಮೇಳನದಲ್ಲಿ ಜಿಲ್ಲೆಯ ಸಾಂಸ್ಕೃತಿಕ, ಶ್ರೀಮಂತ ಪರಂಪರೆ ಬಿಂಬಿಸಬೇಕು. ರಾಜ್ಯಮಟ್ಟದಲ್ಲಿ ಮಂಡ್ಯ ಜಿಲ್ಲೆ ಪ್ರತಿನಿಧಿಸಬೇಕು. ಯಕ್ಷಗಾನ ಕಲೆಯ ಮೂಲ ಮಂಡ್ಯ. ಯಕ್ಷಗಾನದ ತವರು ಮಂಡ್ಯ. ಕೆಂಪಣ್ಣಗೌಡ ಮೊದಲ ಕವಿ. ಮೂಡಲಪಾಯ ಕಲೆ ಮತ್ತೆ ಬೆಳಕಿಗೆ ಬರಬೇಕು. ಮಂಡ್ಯ ಜಿಲ್ಲೆಯ ಕೊಡುಗೆಗಳನ್ನು ಕೇಂದ್ರವಾಗಿಟ್ಟುಕೊಂಡು ಚರ್ಚೆಯಾಗಬೇಕು. ಆದ್ದರಿಂದ ರಾಜ್ಯಮಟ್ಟದ ವಿದ್ವಾಂಸರನ್ನು ಕರೆಸಬೇಕು ಎಂದು ಸಲಹೆ ನೀಡಿದರು.

ಕೃಷಿ ಸಂಸ್ಕೃತಿಗೆ ಮಂಡ್ಯ ಕೊಡುಗೆ ಅಪಾರ. ನೇಗಿಲಯೋಗಿ ಪರಿಕಲ್ಪನೆ ಚರ್ಚೆಯಾಗಬೇಕು. ಸಮ್ಮೇಳನಕ್ಕೆ ಘನತೆಯೇ ಗೋಷ್ಠಿ. ಗೋಷ್ಠಿ ಬಗ್ಗೆ ಚರ್ಚೆ ಆಗಬೇಕು. ಸಾಹಿತ್ಯ, ಕೃಷಿ, ಸಂಸ್ಕೃತಿ ಮತ್ತು ಜಾನಪದ ಗೋಷ್ಠಿಯಾಗಬೇಕು. ಅನುವಾದ ಗೋಷ್ಠಿ ಆರಂಭಿಸುವ ಮೂಲಕ ಅನುವಾದ ಗೋಷ್ಠಿ ಮೊದಲು ಮಾಡಿದ ಕೀರ್ತಿ ಮಂಡ್ಯ ಸಮ್ಮೇಳನಕ್ಕೆ ಸಲ್ಲಬೇಕು ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಜಿಲ್ಲೆಯ ಸಾಹಿತಿಗಳನ್ನೆಲ್ಲ ಆಹ್ವಾನಿಸಿ ಸಮಾಲೋಚನಾ ಸಭೆ ಆಯೋಜನೆಗೆ ಕಾರಣರಾದ ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರಿಗೆ ಅಭಿನಂದನೆಗಳು. ಸಾಹಿತ್ಯ ಸಮ್ಮೇಳನದ ನೆನಪು ಉಳಿಯುವ ಕಾರ್ಯ ಆಗಬೇಕು. ಮಂಡ್ಯ ಮಾದರಿ ಇಟ್ಟುಕೊಂಡು ಸಮ್ಮೇಳನ ಆಯೋಜಿಸಲಿ. ಎಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕು. ಜಿ.ನಾರಾಯಣ್, ಶಂಕರಗೌಡ, ಸಾಹುಕಾರ್ ಚೆನ್ನಯ್ಯ, ಶ್ರೀಕಂಠೇಗೌಡರ ಹೆಸರನ್ನು ಮಹಾದ್ವಾರಗಳಿಗೆ ಇಡಬೇಕು. ಈ ಮೂಲಕ ಜಿಲ್ಲೆಯ ಮಹನೀಯರನ್ನು ನೆನೆಯಬೇಕು ಎಂದು ಹೇಳಿದರು.

ಖ್ಯಾತ ವಾಗ್ಮಿ ಪ್ರೊ.ಕೃಷ್ಣೇಗೌಡ ಮಾತನಾಡಿ, ಬಹುಮುಖ್ಯವಾಗಿ ಜನರು ಗ್ರಹಿಸುವುದು ಸಮ್ಮೇಳನದ ಧ್ವನಿ ಏನು ಎಂಬುದು. ಸಮ್ಮೇಳನದ ಬಗ್ಗೆ ಜನರ ಗ್ರಹಿಕೆ ಏನು ಎಂಬುದು ಮುಖ್ಯ. ಅತಿ ದೊಡ್ಡ ಕಾರ್ಯಕ್ರಮ ಇದಾಗಿದ್ದು, ಸುಸಂಸ್ಕೃತದ ಸಮ್ಮೇಳನ ಇದಾಗಲಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ಮಾತನಾಡಿ, ಪ್ರಜಾಪ್ರಭುತ್ವ ಅಡಿಯಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರದ ಸಹಕಾರ ಸಹಭಾಗಿತ್ವ, ಸಮನ್ವಯತೆ ಸಮಾಲೋಚನೆ ಮುಖ್ಯ. ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಜಿಲ್ಲಾಡಳಿತ ಅತಿ ಉತ್ಸಾಹದಿಂದ ಕೆಲಸ ಮಾಡುತ್ತಿದೆ. ಸಮ್ಮೇಳನದ ಯಶಸ್ವಿಗೆ ಎಲ್ಲರ ಸಹಕಾರ ಬೆಂಬಲ ಮುಖ್ಯ ಎಂದು ಮನವಿ ಮಾಡಿದರು.

ಸಭೆಯಲ್ಲಿ ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಇತರರಿದ್ದರು.

ಮಂಡ್ಯದ ಸತ್ಕಾರವನ್ನು ಎಲ್ಲರೂ ನೆನೆಯಬೇಕು

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಸಮ್ಮೇಳನ ಯಶಸ್ವಿಗೊಳಿಸಲು ಎಲ್ಲರ ಸಹಕಾರ, ಬೆಂಬಲ ಅತ್ಯಾವಶ್ಯಕ. ಮಂಡ್ಯದ ಆತಿಥ್ಯ, ಸತ್ಕಾರವನ್ನು ಎಲ್ಲರೂ ನೆನೆಯಬೇಕು. ಆ ನಿಟ್ಟಿನಲ್ಲಿ ಸಮ್ಮೇಳನ ಯಶಸ್ವಿಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಂಡ್ಯಕ್ಕೆ ತನ್ನದೇ ಆದ ಸೊಗಡಿದೆ. ನೂರಕ್ಕೆ ನೂರು ಈ ಸಮ್ಮೇಳನ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನದ ಕುರುಹು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಕಲಾಮಂದಿರ ದುರಸ್ತಿ ಕಾರ್ಯ ವಾರದಲ್ಲಿ ಪೂರ್ಣಗೊಳ್ಳಲಿದೆ. ಅಂಬೇಡ್ಕರ್ ಭವನ ಸಿದ್ಧವಾಗುತ್ತಿದೆ. ರೈತ ಭವನದ ನವೀಕರಣಕ್ಕೂ ಚಾಲನೆ ನೀಡಲಾಗಿದೆ. ಶಿವಪುರ ಧ್ವಜ ಸತ್ಯಾಗ್ರಹ ಪ್ರತಿಷ್ಠಾನ ರಚನೆ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಸ್ಥಾಪನೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಇದೆ. ಮೂವತ್ತು ವರ್ಷದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ಕೃಷಿ ವಿವಿ, ಸಕ್ಕರೆ ಕಾರ್ಖಾನೆ ಪುನರಾರಂಭಿಸಲಾಗಿದೆ. ನೂತನ ಸಕ್ಕರೆ ಕಾರ್ಖಾನೆ ಬಗ್ಗೆ ಸಂಪುಟದ ಚರ್ಚೆಗೆ ಕಳುಹಿಸಲಾಗಿದೆ. ಅಭಿವೃದ್ಧಿ ನಿರಂತರ, ಸಾಹಿತ್ಯ ಸಮ್ಮೇಳನ ವಿಶೇಷ. ಮೂವತ್ತು ವರ್ಷಗಳ ನಂತರ ನಡೆಯುತ್ತಿರುವ ಈ ಸಮ್ಮೇಳನವನ್ನು ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ನೆರವೇರಿಸಲಾಗುವುದು. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಇದು ಸರ್ಕಾರ, ಜಿಲ್ಲಾಡಳಿತ ಅಥವಾ ಕನ್ನಡ ಸಾಹಿತ್ಯ ಪರಿಷತ್‌ನ ಸಮ್ಮೇಳನವಲ್ಲ. ಬದಲಿಗೆ ಎಲ್ಲ ಕನ್ನಡಿಗರ ಮನ ಮನೆಯ ಸಮ್ಮೇಳನ. ನಾವೆಲ್ಲ ಒಂದು ಎಂಬ ಅಭಿಮಾನ ಮೂಡಿಸಲು ಸರ್ವರ ಸಹಕಾರದ ಅವಶ್ಯಕತೆ ಇದೆ. ಸಮ್ಮೇಳನದಲ್ಲಿ ಸಾಹಿತಿಗಳ ಸಹಕಾರ ಬಹಳ ಮುಖ್ಯ. ಜಿಲ್ಲಾ ಉಸ್ತುವಾರಿ ಸಚಿವರು ಸಮ್ಮೇಳನದ ಪ್ರತಿಯೊಂದು ಕೆಲಸದಲ್ಲೂ ಮಾರ್ಗದರ್ಶನ ಸಹಕಾರ ನೀಡುತ್ತಾ ಬಂದಿದ್ದಾರೆ. 28 ಸಮಿತಿ ಈಗಾಗಲೇ ರಚನೆ ಮಾಡಿಕೊಂಡಿದ್ದು, ಎಲ್ಲರೂ 5 ರಿಂದ 6 ಸಭೆ ಮಾಡಿ ಕ್ರಿಯಾಯೋಜನೆ ರೂಪಿಸಿ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನಕ್ಕೆ ಸಾಹಿತಿಗಳ ಸಲಹೆ

* ಮಂಡ್ಯ ಜಿಲ್ಲೆಗೆ ಪ್ರತ್ಯೇಕ ಗೋಷ್ಠಿ ಮೀಸಲಿರಿಸಬೇಕು

* ನಾಡು, ನುಡಿ, ನೀರಿಗಾಗಿ ಹೋರಾಟ ಮಾಡಿದವರ ನೆನೆಯುವ ಗೋಷ್ಠಿ ಇರಬೇಕು.

* ಯುವ ಸಾಹಿತ್ಯ, ಮಕ್ಕಳ ಸಾಹಿತ್ಯದ ಬಗ್ಗೆ ಚರ್ಚೆಯಾಗಬೇಕು. ಮಹಿಳೆಯರಿಗೆ ಆದ್ಯತೆ ನೀಡಬೇಕು.

* ಮಹಾಕಾವ್ಯಗಳ ಬಗ್ಗೆ ಗೋಷ್ಠಿಯಾಗಬೇಕು. ಉಪವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು.

* ಮುದ್ರಣಕಾರರಿಗೆ ಸಹಾಯಹಸ್ತ ನೀಡಬೇಕು

* ನಶಿಸುತ್ತಿರುವ ತೊಗಲುಬೆಂಬೆ ಕಲೆ ಪ್ರದರ್ಶನಕ್ಕೆ ಒತ್ತು ಕೊಡಬೇಕು. ತೊಗಲುಬೊಂಬೆ ಶ್ರೀಮಂತಿಕೆ ಪರಿಚಯಿಸಬೇಕು.

* ಜಿಲ್ಲೆಯ ಎಲ್ಲ ಲೇಖಕರ ಪುಸ್ತಕ ಪ್ರದರ್ಶನ ಏರ್ಪಾಡು ಮಾಡಿ ಜಿಲ್ಲಾ ಸಾಹಿತ್ಯ ಪುಸ್ತಕ ಪ್ರದರ್ಶನ ಮಾಡಬೇಕು.

* ಮುದ್ರಣಗೊಳ್ಳುವ ಪುಸ್ತಕಗಳಲ್ಲಿ ಸಾಹಿತಿಗಳ ಫೋಟೋ ಮಾತ್ರ ಇರಬೇಕು.

* ಕಾಲೇಜು, ಹೈಸ್ಕೂಲ್‌ಗಳಿಗೆ ಸಂಚಾಲಕರನ್ನು ನೇಮಿಸಿ ಕನ್ನಡ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಬೇಕು.

* ಎಲ್ಲ ವರ್ಗದ ವಚನಕಾರರ ವಚನಗೋಷ್ಠಿ ಇರಬೇಕು

* ಸಮ್ಮೇಳನದ ನೆನಪಿಗೆ 87 ಪುಸ್ತಕಗಳನ್ನು ಬಿಡುಗಡೆ ಮಾಡಬೇಕು ಎಂದು ಸಲಹೆ ನೀಡಿದರು.